Your cart is empty now.
(ಸಮೀಕ್ಷಾ ಸಂಪುಟ - 1)
ಇಪ್ಪತ್ತನೆಯ ಶತಮಾನದ ಭಾರತದ ಒಟ್ಟೂ ಬದುಕಿನ ಸಂಸ್ಕೃತಿ ಪುನಾರಚನೆಯ ಸಂಕೀರ್ಣವಾದ ಮತ್ತು ಕಠಿಣತಮವಾದ ಸವಾಲನ್ನು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಮ್ಮ ಪ್ರಜ್ಞಾವಂತರು, ಪ್ರತಿಭಾವಂತರು ಹೇಗೆ ಎದುರಿಸಿದ್ದಾರೆ ಎಂಬ ಚರ್ಚೆ ಈ ಸಂಪುಟಗಳ ಮೂಲ ಉದ್ದೇಶ. ವಿಮರ್ಶಾತ್ಮಕ ಸಮೀಕ್ಷಾರೂಪದ ಈ ಅಧ್ಯಯನವು ಕನ್ನಡ ಸಾಹಿತ್ಯ ಲೋಕದ ಸಂವೇದನೆಯ ಸಂಸ್ಕಾರವನ್ನು ಶ್ರುತಿಗೊಳಿಸುವುದರಲ್ಲಿ ಮುಖ್ಯಪಾತ್ರವಹಿಸುತ್ತದೆ. ಇದು ಸಾಹಿತ್ಯದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಆಕರವಾಗುವಲ್ಲಿ ಸಂದೇಹವಿಲ್ಲ. ಈ ಸಂಪುಟದಲ್ಲಿ ಕಾವ್ಯ, ನಾಟಕ, ಕಥೆ, ಕಾದಂಬರಿಯ ಪ್ರಕಾರಗಳಲ್ಲಿನ ಬೆಳವಣಿಗೆಗಳನ್ನು ಇಪ್ಪತ್ತೈದು ವರ್ಷಗಳ ಕಾಲಾವಧಿಯಲ್ಲಿ ಗುರುತಿಸಿದರೆ, ವಿಮರ್ಶೆ, ಸಂಶೋಧನೆ ಹಾಗು ಜಾನಪದ ಸಾಹಿತ್ಯ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ಹಾಸ್ಯ ಸಾಹಿತ್ಯ, ಪ್ರವಾಸ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಆತ್ಮಕತೆ ಜೀವನ ಚರಿತ್ರೆಗಳನ್ನು ಕುರಿತ ಬರಹಗಳು ಎರಡನೆಯ ಸಂಪುಟದಲ್ಲಿವೆ.
*-ಜಿ . ಎಚ್. ನಾಯಕ* (ಸಂಪಾದಕರ ಮಾತಿನಿಂದ)
***********************
(ಸಮೀಕ್ಷಾ ಸಂಪುಟ -2)
ಶತಮಾನದ ಕನ್ನಡ ಸಾಹಿತ್ಯ ಸಮೀಕ್ಷೆ ಮೊದಲ ಸಂಪುಟದಂತೆಯೇ ಈ ದ್ವಿತೀಯ ಸಂಪುಟವೂ ಸಾಹಿತಿಗಳಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ. ಯಾರೇ ಇಂಥ ಸಮೀಕ್ಷಾ ರೂಪದ ಲೇಖನಗಳನ್ನು ಬರೆದರೂ ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಓದುಗರ ಸರ್ವಾನುಮತದ ಒಪ್ಪಿಗೆ ಪಡೆದು ಅಥವಾ ಸರ್ವಾನುಮತದ ಒಪ್ಪಿಗೆ ನಿರೀಕ್ಷಿಸಿ ಸಾಹಿತ್ಯ ವಿಮರ್ಶೆಯ ಲೇಖನಗಳನ್ನು ಬರೆಯಲಾಗುವುದಿಲ್ಲ. ಯಾರೋ ಒಬ್ಬರೂ ಇಬ್ಬರೂ ವಿಮರ್ಶಕರ ವಿಮರ್ಶೆಯ ಲೇಖನಗಳಿಂದ ಒಂದು ಕೃತಿಯ ಮೌಲ್ಯವೊ ಸಾಹಿತಿಯ ಮಹತ್ವವೊ ತೀರ್ಮಾನವಾಗುವುದೂ ಇಲ್ಲ. ಸಾಹಿತ್ಯ ವಿಮರ್ಶೆಯ ಹಾಗು ಸಾಹಿತ್ಯ ಚರಿತ್ರೆಯ ಬರವಣಿಗೆ ನಿರಂತರವಾಗಿ ನಡೆಯುತ್ತಲೇ ಹೋಗುವ, ಹಾಗು ನಡೆಯುತ್ತಲೇ ಹೋಗಬೇಕಾದ ಕ್ರಿಯೆ. ಉತ್ತಮ ಕೃತಿ ಹಾಗೂ ಸತ್ವಶಾಲಿಯಾದ ಸಾಹಿತಿ ಕಾಲಕಾಲಕ್ಕೆ ಮರುಮೌಲ್ಯಮಾಪನಕ್ಕೆ ಒಳಗಾಗುತ್ತಲೇ ಇರಬೇಕಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ; ಎಲ್ಲ ಕ್ಷೇತ್ರಗಳಲ್ಲಿಯೂ ವಿಮರ್ಶೆಯನ್ನು ಸಹಿಸದ ಸಂಸ್ಕೃತಿ, ಒಪ್ಪಿಗೆಯಾಗದಿರುವುದನ್ನು ಕುರಿತು ಸಲ್ಲದ ರೀತಿಯಲ್ಲಿ ವರ್ತಿಸದೆ ಗಂಭೀರವಾಗಿ ಚರ್ಚಿಸುವ ಸಂಸ್ಕೃತಿ ನಶಿಸದಂತೆ ಎಚ್ಚರವಹಿಸಬೇಕಾಗಿದೆ. ಪ್ರಜಾಸತ್ತಾತ್ಮಕ ಮನೋಧರ್ಮವನ್ನು ಎಲ್ಲ ಕ್ಷೇತ್ರಗಳಲ್ಲಿಯೂ, ನಮ್ಮ ಚಟುವಟಿಕೆಗಳಲ್ಲಿಯೂ ಬೆಳೆಸಬೇಕಾಗಿದೆ. ಅದು ಎಲ್ಲ ಪ್ರಜ್ಞಾವಂತರ ಕರ್ತವ್ಯವಾಗಿದೆ.
*-ಜಿ. ಎಚ್. ನಾಯಕ* (ಸಂಪಾದಕರ ಮಾತಿನಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.