ಒಂದು ಸಾರ್ಥಕ ಜೀವನದ ಅಮೋಘ ನಿರೂಪಣೆ ಇರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು
ಜಗತ್ತಿನ ಇಂದಿನ ತುಡಿತಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವಂತಹ ಮೇರುಕೃತಿ, ತನ್ನನ್ನು
ವೈಭವಿಸಿಕೊಳ್ಳುವ ಗೋಜಿಗೆ ಎಂದೂ ಹೋಗದೆ ಅನನ್ಯ ವಿಮೋಚನಾ ಸಮರವನ್ನು ಮುನ್ನಡೆಸುವ
ನಾಯಕನೊಬ್ಬನ ಮಹದ್ಗುಣಗಳಿಗೆ ಆದರ್ಶಪ್ರಾಯನಾದ ಮಂಡೇಲಾರ ಬಹುಮುಖೀ ಜೀವನದ
ಸಮಗ್ರ ಚಿತ್ರಣ ಇಲ್ಲಿ ದೊರೆಯುತ್ತದೆ. ಜಗತ್ಪಸಿದ್ಧ ರಿವೋನಿಯಾ ವಿಚಾರಣೆಯು ನಮ್ಮ ಜೀವಿತಕಾಲದ
ಮೌಲಿಕ ದಸ್ತಾವೇಜು ಮತ್ತು ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟವು ಎಲ್ಲ ಕಾಲಗಳಿಗೂ ಮತ್ತು
ಎಲ್ಲೆಡೆಗೂ ಅತ್ಯಂತ ಪ್ರಸ್ತುತವಾದ ಸಂಗತಿ. ಅಧಿಕೃತ ಪುರಾವೆಗಳ ಮೂಲಕ ಸಮರ್ಥವಾಗಿ ಡಾ. ಎಂ.
ವೆಂಕಟಸ್ವಾಮಿ ಅವರು ಮಂಡೇಲಾ ಮತ್ತವರ ಸಹ-ಹೋರಾಟಗಾರರ ಜೀವನಗಾಥೆಯನ್ನು ಆಪ್ತವಾಗಿ
ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಮತ್ತು ವಂದನೆಗಳು ಸಲ್ಲುತ್ತವೆ.
- ಡಾ. ಜಿ. ರಾಮಕೃಷ್ಣ
ಡಾ. ಎಂ. ವೆಂಕಟಸ್ವಾಮಿಯವರು ರಚಿಸಿರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು ಲೇಖಕರ
ಅಪಾರ ಅಧ್ಯಯನದಿಂದ ಮೂಡಿಬಂದಿದೆ. ಮಂಡೇಲಾ ಅವರ ಬಾಲ್ಯದಿಂದ ಆರಂಭಿಸಿ ಭೌತಿಕ
ಅಂತ್ಯದವರೆಗಿನ ದಟ್ಟ ವಿವರಗಳ ಮಾಹಿತಿಯಿಂದ ತುಂಬಿಕೊಂಡಿರುವ ಈ ಕೃತಿಯ ನಿರೂಪಣೆಯಲ್ಲಿ
ಅಧಿಕೃತ ವರದಿಗಾರಿಕೆಯ ಲಕ್ಷಣ ಎದ್ದುಕಾಣುತ್ತದೆ. ನೆಲ್ಸನ್ ಮಂಡೇಲಾ ಅವರು ಜಗತ್ತು ಕಂಡ
ಬಹುದೊಡ್ಡ ಪ್ರಜಾಪ್ರಭುತ್ವವಾದಿ ಹೋರಾಟಗಾರರಲ್ಲಿ ಒಬ್ಬರಾಗಿರುವುದರಿಂದ, ಈ ಕೃತಿ ರಚನೆ ಮತ್ತು
ಪ್ರಕಟಣೆ, ಅವರಿಗೆ ಅರ್ಪಿಸಿದ ಪ್ರಜಾಸತ್ತಾತ್ಮಕ ಗೌರವವಾಗಿದೆ.
– ಡಾ. ಬರಗೂರು ರಾಮಚಂದ್ರಪ್ಪ.
ಅನ್ಯದೇಶಗಳನ್ನು ಅತಿಕ್ರಮಿಸಿಕೊಂಡ ಯೂರೋಪಿನ ವಸಾಹತುಶಾಹಿಗಳು ಅಲ್ಲಿನ ಸಂಪತ್ತನ್ನು ಲೂಟಿ
ಮಾಡುವುದಷ್ಟೇ ಅಲ್ಲದೆ ತಮ್ಮ ಆಡಳಿತದುದ್ದಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಗ್ಗಿಲ್ಲದೆ
ಮಾಡುತ್ತಾ ಬಂದರು. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರಿಗೆ ಬಂಟುಸ್ತಾನ್‌ಗಳೆಂಬ ಕೊಳೆಗೇರಿಗಳನ್ನು
ನಿರ್ಮಿಸಿ ತಮ್ಮ ಸೇವೆಗಾಗಿಯೇ ಇರಿಸಿಕೊಂಡಿದ್ದರು. ಅಪಾರ್ಥೀಡ್‌ನಂಥ ಘೋರ ಅಪಮಾನಕ್ಕೆ
ಈಡುಮಾಡಿದರು. ಅಂಥ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಸೂರ್ಯೋದಯದಂತೆ ನೆಲ್ಸನ್ ಮಂಡೇಲಾ
ಉದಯಿಸಿದರು. ವಿಜ್ಞಾನ ಬರವಣಿಗೆಗೆ ಹೆಸರಾದ ಮಿತ್ರ ಎಂ. ವೆಂಕಟಸ್ವಾಮಿ, ಮಂಡೇಲಾ ಜೀವನ
ಕಥನವನ್ನು ಸಾದ್ಯಂತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
– ಡಾ. ಮೂಡ್ನಾಕೂಡು ಚಿನ್ನಸ್ವಾಮಿ
1980ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಕರಿಯರ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ
ಕನ್ನಡಿಗರಿಗೆ ಆ ಹೋರಾಟಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಸಿಗುತ್ತಿರಲಿಲ್ಲ. 1990ರಲ್ಲಿ ಕನ್ನಡದಲ್ಲಿ
ಮಂಡೇಲಾ ಜೀವನ ಚರಿತ್ರೆ ಪ್ರಕಟವಾದಾಗ, ಭಾರತೀಯ ಭಾಷೆಗಳಲ್ಲಿ ಬಂದ ಮೊದಲ ಪುಸ್ತಕವಾಯಿತು.
ಈಗ 33 ವರ್ಷಗಳ ನಂತರ ಮಂಡೇಲಾರ ವಿಸ್ತ್ರತ ಜೀವನ ಚರಿತ್ರೆ ಪ್ರಕಟವಾಗುತ್ತಿರುವುದು ಹೆಮ್ಮೆಯ
ವಿಚಾರ. ಡಾ. ಎಂ. ವೆಂಕಟಸ್ವಾಮಿಯವರ ಶ್ರಮ ಸಾರ್ಥಕವಾಗಿದೆ.
– ರಂಜಾನ್ ದರ್ಗಾ