Your cart is empty now.
ಹಿರಿಯ ಕಾದಂಬರಿಕಾರ ಡಾ. ನಾ. ಮೊಗಸಾಲೆ ಅವರ ಹೊಸ ಕಾದಂಬರಿ 'ಕೊಪ್ಪರಿಗೆ ಮನೆ' ಹಲವು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಕೌಟುಂಬಿಕ ನೆಲೆಯ ಕಥಾನಕವೊಂದು ಸಾಮಾಜಿಕವೂ ರಾಷ್ಟ್ರೀಯವೂ ಆಗುವ ಅಪರೂಪದ ಕೃತಿ ಇದು. ಹತ್ತೊಂಬತ್ತನೆಯ ಶತಮಾನದ ಕೊನೆಯ ವಸಾಹತುಶಾಹಿ ಆಡಳಿತ ಮತ್ತು ಇಪ್ಪತ್ತನೆಯ ಶತಮಾನದ ಗಾಂಧೀಯುಗ - ಹೀಗೆ ಎರಡು ತಲೆಮಾರುಗಳಿಗೆ ಸೇರಿದ; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಪ್ರದೇಶದ ಊರೊಂದರ ಪಟೇಲಿಕೆ ಮತ್ತು ದೇವಸ್ಥಾನದ ಮುಕ್ತಸರಿಕೆ ಇದ್ದ ಗಣ್ಯ ಹವ್ಯಕ ಬ್ರಾಹ್ಮಣ ಜಮೀನುದಾರ ಕುಟುಂಬದ – ಎರಡು ತಲೆಮಾರುಗಳ ಕಥಾನಕ ಇಲ್ಲಿದೆ. ಅಪ್ಪ ಶಂಕರ ಭಟ್ಟ ಮತ್ತು ಮಗ ಕೇಶವ ಭಟ್ಟರು ಆಧುನಿಕತೆಗೆ ಸ್ಪಂದಿಸಿದ್ದು ದೇವಾಲಯ ಜೀರ್ಣೋದ್ಧಾರ ಮತ್ತು ಮನೆಗಳಿಗೆ ಹಂಚು ಹೊದಿಸುವ ರೂಪಕದ ಮೂಲಕ ದಾಖಲಾದರೆ; ಕಾಲಪರಿವರ್ತನೆಯು ಸ್ತ್ರೀಸ್ವಾತಂತ್ರ್ಯಕ್ಕೆ ಅನುವುಮಾಡಿಕೊಟ್ಟದ್ದು ಇಲ್ಲಿನ ಸ್ತ್ರೀಯರನ್ನು ಇಬ್ಬರು ಪ್ರಮುಖ ಪಾತ್ರಗಳು ಗೌರವದಿಂದ ನಡೆಸಿಕೊಂಡದ್ದನ್ನು ತೋರಿಸುವ ಮೂಲಕ ದಾಖಲಾಗಿದೆ; ಮೂರನೆಯದಾಗಿ ಈ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿದ್ದು ಕೇಶವ ಭಟ್ಟರು ಪಟೇಲಿಕೆಗೆ ರಾಜೀನಾಮೆ ಎಸೆದು ರಾಷ್ಟ್ರೀಯ ಕಾರಣಕ್ಕೆ ಸ್ಪಂದಿಸುವುದರ ಮೂಲಕವೂ ಹೋರಾಟದ ಹಲವು ಮುಖಗಳ ಚಿತ್ರಣದ ಮೂಲಕವೂ ಇಲ್ಲಿ ದಾಖಲಾಗಿದೆ. ಈ ಮೂರು ವಿಷಯ-ಆಶಯಗಳು ಕಾದಂಬರಿಯ ವಸ್ತುವಿನ ಮಹತ್ವವನ್ನು ಸೂಚಿಸುವಂತಿವೆ. ಕಾದಂಬರಿಯ ಆಶಯಗಳನ್ನು ಪರಿಶೀಲಿಸಲು ಸಮೀಚೀನವಾದ ಕಥಾಸಂವಿಧಾನವನ್ನು ರಚಿಸಿಕೊಂಡಿರುವುದು ಡಾ. ಮೊಗಸಾಲೆಯವರು ಕಥನಕಲೆಯಲ್ಲಿ ಪಡೆದಿರುವ ಹಿಡಿತಕ್ಕೆ ಸಾಕ್ಷಿಯಾಗಿದೆ. 'ಕೊಪ್ಪರಿಗೆ ಮನೆ' ಕಾದಂಬರಿ ಮೊಗಸಾಲೆಯವರ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಮಾತ್ರವಲ್ಲ; ಕನ್ನಡದ ಮುಖ್ಯ ಕಾದಂಬರಿಗಳಲ್ಲಿಯೂ ಒಂದು.
-ಡಾ. ಬಿ. ಜನಾರ್ದನ ಭಟ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.