ಈ ಆತ್ಮಕಥನದ ಕುರಿತು ಚಿಂತಕರಾದ ಎ ನಾರಾಯಣ ಅವರ ಮಾತು ಹೀಗಿವೆ
ಕರ್ನಾಟಕ ಸರಕಾರದ ಅಪರ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿರುವ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕತೆಯ ಕನ್ನಡ ಭಾಷಾಂತರ 'ಕಲ್ಯಾಣ ಕೆಡುವ ಹಾದಿ' ಎಂಬ ಈ ಕೃತಿ ಸುಮಾರು ನಾಲ್ಕು ದಶಕಗಳ ಅವಧಿಯ ಕರ್ನಾಟಕ ಚರಿತ್ರೆಯ ಕೆಲವು ಅಮೋಘ ತುಣುಕುಗಳನ್ನು ಪೋಣಿಸಿ ನಮ್ಮ ಮುಂದಿಡುತ್ತದೆ.
ಬಾಲಸುಬ್ರಮಣಿಯನ್ ಅವರ ಸೇವಾವಧಿಯಾದ ೧೯೬೫ ರಿಂದ ೨೦೦೧ ರ ವರೆಗಿನ ಅವಧಿ ಮತ್ತು ನಿವೃತ್ತಿಯ ನಂತರವೂ ಅವರು ಸರಕಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾಗಿದ್ದ ಸುಮಾರು ಒಂದು ದಶಕ ಎರಡೂ ಸೇರಿದರೆ ಅದು ಕರ್ನಾಟಕ ರಾಜ್ಯ ಮಹತ್ತರ ಚಾರಿತ್ರಿಕ ತಿರುವುಗಳನ್ನು ಕಂಡ ಒಂದು ಕಾಲಘಟ್ಟ. ಬಾಲಸುಬ್ರಮಣಿಯನ್ ತಮ್ಮ ಸೇವಾವಧಿಯ ಈ ಕಾಲದ ಆಗುಹೋಗುಗಳನ್ನು 'ಕಂಡದ್ದನ್ನು ಕಂಡ' ಹಾಗೆ ದಾಖಲಿಸಿದ್ದು ಒಂದೆಡೆ. ಇನ್ನೊಂದೆಡೆ ಈ ಪುಸ್ತಕದ ಶೀರ್ಷಿಕೆಯ ಎರಡನೇ ಭಾಗ (ಕ್ರಾಂತಿಕಾರಿ ಐಎಎಸ್ ಅಧಿಕಾರಿಯೊಬ್ಬರ ನೆನಪಿನ ಪುಟಗಳು) ಸೂಚಿಸುವಂತೆ ಇಲ್ಲಿ ವ್ಯವಸ್ಥೆಯೊಳಗನ ಹೋರಾಟಗಾರನೋರ್ವನ ಅನುಭವ ಕಥನವೂ ಇದೆ.
ಸಾಮಾನ್ಯವಾಗಿ ನಿವೃತ್ತ ಅಧಿಕಾರಿಗಳು ತಮ್ಮ ಆತ್ಮಕತೆಗಳಲ್ಲಿ ತಮ್ಮ ಸುತ್ತಲ ಆಗುಹೋಗುಗಳನ್ನು ಓರ್ವ ಜನಸೇವಕನ ತಣ್ಣನೆಯ ದೃಷ್ಟಿಯಲ್ಲಿ ಗ್ರಹಿಸಿದರೆ, ಬಾಲಸುಬ್ರಮಣಿಯನ್ ಮಾತ್ರ ತಮ್ಮ ಸಮಕಾಲೀನ ಘಟನಾವಳಿಗಳನ್ನು ಓರ್ವ ಕ್ರಾಂತಿಕಾರಿಯ ದೃಷ್ಟಿಯಿಂದ ನೋಡಿ ದಾಖಲಿಸಿದ್ದಾರೆ. ನಿವೃತ್ತ ಅಧಿಕಾರಿಗಳು ದಾಖಲಿಸುವ ಘಟನಾವಳಿಗಳಲ್ಲಿ ಸ್ವತಃ ಅವರೇ ಪಾತ್ರಧಾರಿಗಳೂ, ಸೂತ್ರಧಾರಿಗಳೂ ಆಗಿರುತ್ತಾರೆ. ಬಾಲಸುಬ್ರಮಣಿಯನ್ ಪಾತ್ರಧಾರಿಯೂ, ಸೂತ್ರಧಾರಿಯೂ ಆಗಿರುವಾಗಲೇ ವ್ಯವಸ್ಥೆಯೊಳಗಿನ ಅನ್ಯಾಯಗಳಿಗೆ ತಮ್ಮದೇ ಆದ ಪ್ರತಿರೋಧವನ್ನೂ ಒಡ್ಡುತ್ತಾ ಬಂದಿದ್ದರು ಎನ್ನುವ ಕಾರಣಕ್ಕೆ ಈ ಆತ್ಮಕತೆ ಇಂತಹ ಇತರ ಕೃತಿಗಳಿಗಿಂತ ವಿಶಿಷ್ಟವಾಗಿ ಮೂಡಿಬಂದಿದೆ. ಆದರೆ ಈ ಕ್ರಾಂತಿಕಾರಿ ದಾಖಲಾತಿಯ ಶೈಲಿಯಲ್ಲಿ ನವಿರಾದ ಹಾಸ್ಯವಿದೆ. ಅಧಿಕಾರಿಯ ತಟಸ್ಥತೆ ಮತ್ತು ಹೋರಾಟಗಾರನ ಪ್ರತಿರೋಧದ ಜತೆಗೆ ಲಲಿತ ಪ್ರಬಂಧಕಾರನ ಲವಲವಿಕೆಯೂ ಮಿಳಿತಗೊಂಡ ಒಂದು ವಿಶಿಷ್ಟ ನಿರೂಪಣಾ ಶೈಲಿಯಲ್ಲಿ ಈ ಕೃತಿ ಅನಾವರಣಗೊಳ್ಳುತ್ತಾ ಸಾಗುತ್ತದೆ. ವಸ್ತು ಮತ್ತು ಶೈಲಿ ಎರಡೂ ದೃಷ್ಟಿಯಿಂದ ನೋಡಿದರೂ ಇದು ಆಡಳಿತಗಾರನೋರ್ವನ ಒಣ ದಿನಚರಿಯಲ್ಲ, ಬದಲಿಗೆ ಒಂದು ಸುಧೀರ್ಘ ಅವಧಿಗೆ ಸಂಬಂದಿಸಿದ ಕನ್ನಡ ನಾಡಿನ ಸಾಮಾಜಿಕ-ರಾಜಕೀಯ ಕಥನ.
ಈ ಕಥನ ಕರ್ನಾಟಕ ರಾಜಕೀಯ ಮತ್ತು ಆಡಳಿತ ಕಂಡ ನೈತಿಕ ಪತನದ ಚರಿತ್ರೆಯೂ ಹೌದು. ಹಾಗಾಗಿ ಈ ಕೃತಿಯ ಮೂಲ ಇಂಗ್ಲಿಷ್ ಶೀರ್ಷಿಕೆ 'ಫಾಲ್ ಫ್ರಮ್ ಗ್ರೇಸ್' ಅಂದರೆ 'ಮಹನೀಯತೆಯಿಂದ ಪತನದತ್ತ'.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.