Your cart is empty now.
ಹತ್ತಾರು ಕಾದಂಬರಿ, ನೂರಾರು ಕತೆಗಳನ್ನು ಬರೆದ ಲೇಖಕರ ಹೆಸರಿನಲ್ಲಿ ಕೊನೆಗೂ ಉಳಿಯುವುದು ಕೆಲವೇ ಕೆಲವು ಕತೆ-ಕಾದಂಬರಿಗಳು ಮಾತ್ರ, ಆದರೆ ಡಾ. ರಾಜಶೇಖರ ನೀರಮಾನ್ವಿ ಅವರಂಥ ಅಪರೂಪದ ಲೇಖಕರು ಬರೆದದ್ದು, ಸಂಖ್ಯಾಮಿತಿಯಲ್ಲಿ ಬಹಳ ಕಡಿಮೆ. ಆದರೆ ಸತ್ತ್ವದ ದೃಷ್ಟಿಯಿಂದ ಕಾಲಕಾಲಕ್ಕೆ ಉಲ್ಲೇಖವಾಗುತ್ತಲೂ ಚರ್ಚೆಯಾಗುತ್ತಲೊ, ಹೊಸ ಕತೆಗಾರರಿಗೆ ಮಾದರಿಯಾಗುತ್ತ ಉಳಿದಿರುವುದು, ಅವರ ಚಿನ್ನದ ಕುಸುರಿ ಕೆಲಸದ ರೀತಿಯಿಂದಾಗಿ.
ನವ್ಯದ ಅಂತರ್ಮುಖತೆ ಮತ್ತು ಅತಿಸೂಕ್ಷ್ಮ ಭಾಷಾ ಮೊನಚು, ಬಂಡಾಯದ ಸಮಷ್ಟಿಪ್ರಜ್ಞೆ ಮತ್ತು ಮನುಷ್ಯ ಮೂಲದ ತೊಳಲಾಟ ಅಣ್ಣ ರಾಜಶೇಖರ ಅವರ ಎಲ್ಲ ಕತೆಗಳ ಜೀವಕೋಶಗಳಾಗಿವೆ. ಈ ನಾಲ್ಕು ದಶಕಗಳಲ್ಲಿ ರಾಜಶೇಖರಣ್ಣ ಪ್ರಕಟಿಸಿದ್ದು ಎರಡೇ ಎರಡು ಕಥಾಸಂಕಲನಗಳನ್ನು, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರಗಳು ರಾಜಶೇಖರಣ್ಣ ಸಾಹಿತ್ಯಕ್ಕೆ ಸಿಕ್ಕ ಗೌರವಗಳಾಗಿವೆ.
ಭೂ ಒಡಲದ ಕಂಪನ ಮತ್ತು ಅದರ ರಚನೆ ಹೇಳಿಕೊಟ್ಟ ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ರಾಜಶೇಖರಣ್ಣ, ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗಳು ಸಂಗಮಿಸಿದಾಗ ಹುಟ್ಟಬಹುದಾದ ಬಹುಶ್ರುತ ಜೀವಕಂಪನಗಳ ಒಟ್ಟು ಸಾಹಸತ್ವ ಇಲ್ಲಿ ಸಂಗ್ರಹಿತವಾದ ಈ ಹನ್ನೆರಡು ಕತೆಗಳು.
ಬಳ್ಳಾರಿ ಬಿಸಿಲು ನೆಲದ ಇಬ್ಬರು ಅಣ್ಣಂದಿರಾದ ರಾಜಶೇಖರಣ್ಣ ಮತ್ತು ಚನ್ನಬಸವಣ್ಣ ಎಂಬ ಜೋಡಿ ಜೀವಗಳು ಲೋಹಿಯಾ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಪುಸ್ತಕ ಸಂಸ್ಕೃತಿಯ ಮೂಲಕ ಕರ್ನಾಟಕದ ತುಂಬ ಪರಿಚಯಿಸಿದವರು. ಅದರಲ್ಲೂ ರಾಜಶೇಖರಣ್ಣ ಲೋಹಿಯಾ ಪ್ರಕಾಶನದ ಮೊದಲ ಲೇಖಕ; ಪ್ರಕಾಶನದ ಜೀವಜೀವಾಳ.
ರಾಜಶೇಖರಣ್ಣ ಮಾನವೀಯತೆಯ ನೆಲೆಯಲ್ಲಿ ಕಥೆ ಕಟ್ಟುವ ಕಥಾಶಿಲ್ಪಿ. ಇಲ್ಲಿರುವ ಅವರ ಕಥೆಗಳು ಹೊಸ ಲೇಖಕರಿಗೆ ಮಾದರಿಯಾದವುಗಳು; ಈಗಿರುವ ಲೇಖಕರಿಗೆ ಮರು ಓದಿಗೆ ಪಕ್ಕಾಗಿಸಿ, ಹೊಸ ಅರ್ಥವನ್ನು ನೀಡುವಂತಹವುಗಳು.
- ಸರಜೂ ಕಾಟ್ಕರ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.