Your cart is empty now.
ವಿಕ್ರಮ್ ಸಂಪತ್ ಅವರ ಈ ಸಾವರ್ಕರ್ ಎರಡೂ ಸಂಪುಟಗಳನ್ನು ನಾನು ಇಂಗ್ಲಿಷಿನಲ್ಲೂ, ಈಗ ಕನ್ನಡದಲ್ಲೂ ಓದಿದ್ದೇನೆ. ವಿಕ್ರಮ್ ಅವರ ಮೂಲಸ್ವಭಾವವೇ ಇತಿಹಾಸದ ಸತ್ಯಶೋಧನೆಯೆಂಬುದು ನಿಜ.
ಕನ್ನಡದಲ್ಲಿ ಮಾತ್ರವಲ್ಲ, ಭಾರತದ ಬೇರೆ ಭಾಷೆಗಳಲ್ಲಿ ಇದುವರೆಗೆ ಬಂದಿರುವ ಸಾವರ್ಕರ್ ಕುರಿತಾದ ಕೃತಿಗಳಲ್ಲೇ ಇವರ ಈ ಕೃತಿಗಳಷ್ಟು ಆಳವಾಗಿಯೂ ನಿಖರವಾಗಿಯೂ ಸಂಶೋಧಿಸಿ, ಪ್ರತಿಯೊಂದು ಘಟನೆಗೂ ಆಧಾರವೊದಗಿಸುತ್ತಲೇ ಬರೆದಿರುವ ಕೃತಿಗಳು ಇದುವರೆಗೂ ಬಂದಿಲ್ಲ. ನಾನು ಸಾವರ್ಕರ್ ಬರೆದಿರುವ ಮತ್ತು ಅವರ ಕುರಿತಾಗಿ ಬಂದಿರುವ ಸುಮಾರು ಎಲ್ಲ ಕೃತಿಗಳನ್ನೂ ಓದಿದವನು. ವಿಕ್ರಮ್ ಅವರು ಯಾವ ಘಟನೆಯನ್ನೂ ಪ್ರಸಂಗವನ್ನೂ ಅದು ಜೈಲು ಶಿಕ್ಷೆಯ ಹಿಂಸೆಯೋ ಹಡಗಿನಿಂದ ತಪ್ಪಿಸಿಕೊಂಡು ಓಡಿಹೋದ ಪ್ರಸಂಗವೋ ಜೈಲಿನ ಗ್ರಂಥಾಲಯ ಸುಧಾರಣೆಯ ಕಾರ್ಯವೋ, ಅಭಿನವ ಭಾರತ, ಹಿಂದೂ ಮಹಾಸಭೆಯ ಉದ್ದೇಶವೋ, ಕೆಂಪುಕೋಟೆಯ ವಿಚಾರಣೆಯ ಪ್ರಸಂಗವೋ, ಜೀವನ ಸಂಧ್ಯಾಕಾಲವೋ-ಎಲ್ಲೂ ಉತ್ತೇಕ್ಷೆಯಿಲ್ಲದೆ ಸರಳವಾಗಿ ಅವು ನಡೆದಂತೆಯೇ ಯಥಾವತ್ತಾಗಿ ಬರೆದಿದ್ದಾರೆ. ಹಾಗಂತ, ಅಲ್ಲೆಲ್ಲೂ ಇತಿಹಾಸದ ಭಾಷೆಯೂ ಕುತೂಹಲಕರ ಬಿಗಿಯೂ ಸಡಿಲಗೊಳ್ಳದ ಅವರ ಶೈಲಿಯಿಂದಾಗಿಯೇ ಜಗತ್ತಿನ ಎಲ್ಲ ಇತಿಹಾಸಾಭ್ಯಾಸಿಗಳ ಮತ್ತು ಓದುಗರ ಗಮನ ಸೆಳೆದ ಅತ್ಯಂತ ಜನಪ್ರಿಯ ಲೇಖಕರೆನಿಸಿದ್ದಾರೆ.
ಇಂಥದೊಂದು ವ್ಯಕ್ತಿತ್ವದ ಜೀವನ ಚರಿತ್ರೆಯನ್ನು ವಿಶ್ವಮಟ್ಟದಲ್ಲಿ ದಾಖಲಿಸುವಾಗ, ಅದೂ ಇಂತಹ ಬೃಹತ್ ಸಂಪುಟಗಳ ಗಾತ್ರದಲ್ಲಿ, ಅದೆಷ್ಟು ಅಧ್ಯಯನ, ಕ್ಷೇತ್ರ ಸಂಚಾರ, ಏಕಾಗ್ರತೆ, ಬರವಣಿಗೆಯ ತಪಸ್ಸುಗಳು ಬೇಕೆಂಬುದನ್ನು ನಾನು ಬಲ್ಲೆ. ಈ ಎಲ್ಲವುಗಳನ್ನು ಅವರು ಸಾಧಿಸಿ ಬರೆದ ಖಚಿತವಾದ ರಚನೆ ಈ ಸಂಪುಟಗಳು!
ಸಾವರ್ಕರರ ಜೀವನ, ಧೈಯ, ಚಟುವಟಿಕೆಗಳು, ಬರಹಗಳು ಮತ್ತು ಅವರ ಮೇಲೆ ಪ್ರಭಾವ ಬೀರಿದ ಅಂಶಗಳು, ಅವರ ಮನೆತನದ ವಿವರಗಳು -ಹೀಗೆ ಪ್ರತಿಯೊಂದು ಸಂದರ್ಭಗಳನ್ನು ವಿಕ್ರಮ್ ಅವರು ನಿಖರವಾಗಿ, ಸಮರ್ಥ ಕ್ರಮದಲ್ಲಿ ಬರೆಯುವಾಗ ಎಲ್ಲೂ ಯಾವ ಸಾಲನ್ನೂ ತಪ್ಪಿಸಿಕೊಳ್ಳದಂತೆ ಮಾಡುತ್ತಾರೆ. ಅದೇ ಸಮರ್ಥ ಇತಿಹಾಸಕಾರನ ಲಕ್ಷಣ.
ಈ ಸಂಪುಟಗಳು ಈಗ ಕನ್ನಡದ ಓದುಗರಿಗೂ ದೊರೆಯುತ್ತಿರುವುದು ತೃಪ್ತಿಕರ ಸಂಗತಿ. ಶ್ರೀ ನರೇಂದ್ರ ಕುಮಾರ್ ಮತ್ತು ಶ್ರೀಮತಿ ಮಂಜುಳಾ ಟೇಕಲ್ ಅವರು ಕೂಡ ತುಂಬ ಪಳಗಿದ ಅನುವಾದಕರು. ಆದ್ದರಿಂದಲೇ ಅವರ ಅನುವಾದವೂ ಮೂಲದ ಎಲ್ಲ ಸ್ವಾರಸ್ಯವನ್ನೂ ಬಿಗಿಯನ್ನೂ ಉಳಿಸಿಕೊಂಡಿದೆ. ಈ ಕೃತಿಯನ್ನು ಸಾರ್ವಜನಿಕರು ಮಾತ್ರವಲ್ಲದೆ, ವಿದ್ಯಾರ್ಥಿಗಳು, ಶಿಕ್ಷಕರು, ರಾಜಕೀಯ ಆಸಕ್ತರು -ಹೀಗೆ ಪ್ರತಿಯೊಬ್ಬರೂ ಓದಬೇಕು. ಹಾಗೆ ಓದಿದಾಗಲೇ ನಮ್ಮ ದೇಶದ ಇತಿಹಾಸದ ಮೂಲಸ್ವರೂಪ ತಿಳಿಯುತ್ತದೆ.
-ಎಸ್ ಎಲ್ ಭೈರಪ್ಪ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.