Your cart is empty now.
1 , ಆರಂಭಿಕ ಹಂತಗಳು (ಭಾಗ - 1) ತತ್ತ್ವಶಾಸ್ತ್ರ ಚಿಂತನೆಯು ಧುತ್ತೆಂದು ಎಲ್ಲಿಂದಲೋ ಅವತರಿಸಿಬಿಡುವಂಥದಲ್ಲ. ಮಾನವನು ತನ್ನ ಜಗತ್ತನ್ನು ನೋಡುತ್ತಾ, ತನ್ನ ಅನುಭವಗಳನ್ನು ಅರ್ಥೈಸಿಕೊಳ್ಳೂತ್ತಾ, ಒಂದು ಚಿಂತನಧಾರೆಯನ್ನು ಬೆಳೆಸುತ್ತಾನೆ. ವಸ್ತುನಿಷ್ಠ ಪ್ರಪಂಚವನ್ನು ವ್ಯಾಖ್ಯಾನಿಸುವಾಗ ಅವನು ಹಾದುಬಂದಿರುವ ಹಂತಗಳ ಪ್ರತಿಫಲನವಿರುವುದು ಸಹಜ. ಎಲ್ಲ ದೇಶಗಳ ತತ್ತ್ವಶಾಸ್ತ್ರ ಇತಿಹಾಸಕ್ಕೆ ಇದೊಂದು ಸಾಮಾನ್ಯವಾದ ಹಿನ್ನೆಲೆ. ಅದಲ್ಲದೆ ಆಯಾಯ ದೇಶಗಳ ವಿಶಿಷ್ಟ ದಾರ್ಶನಿಕ ದೃಷ್ಟಿಯ ಆರಂಭ ಮತ್ತು ವಿಕಾಸವು ತತ್ತ್ವಶಾಸ್ತ್ರ ಇತಿಹಾಸದ ಮೂಲಸಾಮಗ್ರಿ. ವಿಶೇಷತಃ ಪ್ರಾಚೀನ ಭಾರತ ಮತ್ತು ಪ್ರಾಚೀನ ಗ್ರೀಸ್ ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ತಮ್ಮದೇ ಧಾಟಿಗಳನ್ನನುಸರಿಸಿ ಹಲವು ದಾರ್ಶನಿಕ ಪ್ರಮೇಯಗಳನ್ನು ಬೆಳೆಸಿವೆ. ಮುಂದಿನ ವಿಭಿನ್ನ ವಿಕಾಸಗಳು ತತ್ತ್ವಶಾಸ್ತ್ರದ ಇತಿಹಾಸದಲ್ಲಿ ದಾಖಲಾಗಿವೆ.
2, ಚೀಣಾದಲ್ಲಿ ತತ್ತ್ವಶಾಸ್ತ್ರ (ಭಾಗ - 2) ಚೀಣಾದ ತತ್ತ್ವಶಾಸ್ತ್ರ ಎಂದೊಡನೆ ಕನ್‌ಫ್ಯೂಶಿಯಸ್ ಮತ್ತು ತವೋ ಹೆಸರುಗಳು ಕೇಳಿಬರುತ್ತವೆ. ಆದರೆ ಅವೆರಡೇ ಚೀಣಾದ ತತ್ತ್ವಶಾಸ್ತ್ರ ಶಾಖೆಗಳಲ್ಲ. ಯಿನ್-ಯಾಂಗ್ ಶಾಖೆ ಮತ್ತು ಬೌದ್ಧಮತ ಸಹ ದಾರ್ಶನಿಕ ಬೆಳಕನ್ನು ಹರಿಸಿವೆ. ಎಲ್ಲ ಶಾಖೆಗಳನ್ನೂ ಚಾರಿತ್ರಿಕ ಮತ್ತು ಸಾಮಾಜಿಕ ಸನ್ನಿವೇಶಗಳ ತಿಳಿವಳಿಕೆಯೊಡನೆ ಪರಾಮರ್ಶೆ ಮಾಡುವ ಈ ಸಂಪುಟವು ಹೊಸ ಕಾಣ್ಕೆಗಳನ್ನು ನೀಡುತ್ತದೆ. ಭಾರತೀಯ ತತ್ತ್ವಶಾಸ್ತ್ರ ಶಾಖೆಗಳ ಧೋರಣೆಗಳೊಡನೆ ಅಲ್ಲಲ್ಲಿ ತುಲನೆ ಮಾಡಿರುವುದು ಗ್ರಂಥದ ವೈಶಿಷ್ಟ್ಯ. ತವೋ ಸಿದ್ಧಾಂತವು ಎಷ್ಟು ಜನಪರ ಮತ್ತು ಕನ್‌ಫ್ಯೂಶಿಯಸ್‌ನ ನೀತಿಶಾಸ್ತ್ರವು ಪ್ರತಿಷ್ಠಿತ ಶಕ್ತಿಗಳ ಆಳ್ವಿಕೆಗೆ ಹೇಗೆ ಮತ್ತು ಎಷ್ಟು ಬೆಂಬಲ ನೀಡಿದೆ ಎಂಬಿತ್ಯಾದಿ ಕುತೂಹಲಕರ ಚರ್ಚೆಗಳು ಅಗತ್ಯವಾಗಿವೆ. ಸಾಮಾನ್ಯವಾಗಿ ಅವುಗಳ ಹೆಸರುಗಳನ್ನು ಅಷ್ಟಾಗಿ ಪ್ರಸ್ತಾಪಿಸದಿದ್ದರೂ ಮೋ ಸಿದ್ಧಾಂತ ಹಾಗೂ ವೈಚಾರಿಕ ಶಾಖೆಗಳು ಚೀಣಾದ ತತ್ತ್ವಶಾಸ್ತ್ರ ಹೇಳುವ ಐದು ಭೂತವಸ್ತುಗಳ ಬದಲಾಗಿ ಚೀಣಾದಲ್ಲಿ ದಾರ್ಶನಿಕ ಸಿದ್ಧಾಂತವು ಬೇರೆ ರೀತಿಯ ಕಲ್ಪನೆಯನ್ನು ಮುಂದಿಟ್ಟಿರುವುದು ಸ್ವಾರಸ್ಯಕರ. ಚೀಣಾದ ಇತಿಹಾಸದ ಮಜಲುಗಳನ್ನು ಗುರುತಿಸಿ ತತ್ತ್ವಶಾಸ್ತ್ರದ ವಿಕಾಸವನ್ನು ನಿರೂಪಿಸಿರುವುದು ಈ ಗ್ರಂಥದ ವೈಶಿಷ್ಟ್ಯ.
3, ಭಾರತದಲ್ಲಿ ತತ್ತ್ವಶಾಸ್ತ್ರ (ಭಾಗ - 3) ತತ್ತ್ವಶಾಸ್ತ್ರದಲ್ಲಿ ವಿಶ್ವದ ಮೂಲವಸ್ತುವಿನ ವಿಚಾರವಲ್ಲದೆ, ಪ್ರಮಾಣಶಾಸ್ತ್ರ, ಆತ್ಮವಿಚಾರ, ವಿಮುಕ್ತಿ, ಮುಂತಾದ ವಿಷಯಗಳು ಚರ್ಚೆಗೆ ಬರುತ್ತವೆ. ಇವಾವುದರ ಬಗೆಗೂ ಭಾರತೀಯ ದಾರ್ಶನಿಕ ಪರಂಪರೆಯ ವಿವಿಧ ಶಾಖೆಗಳು ಒಂದೇ ಉತ್ತರವನ್ನು ಕೊಟ್ಟಿಲ್ಲ. ದೇವರ ಕಲ್ಪನೆ, ವೈದಿಕ ಸಾಹಿತ್ಯವು ತತ್ತ್ವಶಾಸ್ತ್ರಕ್ಕೆ ಮೂಲಾಧಾರವೆಂಬ ಮಾತು, ಪರಮಾಣುವಾದ, ಇವುಗಳನ್ನು ಕುರಿತಂತೆ ಸಹ ಅಭಿಪ್ರಾಯಭೇದಗಳಿವೆ. ಅಂದರೆ, ಭಾರತೀಯ ತತ್ತ್ವಶಾಸ್ತ್ರವು ಬಹುಮುಖೀ ಪ್ರತಿಪಾದನೆಗಳ ಆಕರ. “ಬ್ರಹ್ಮನ್” ಎಂಬುದನ್ನು ಕುರಿತಂತೆ ಅನೇಕ ವ್ಯಾಖ್ಯಾನಗಳಿವೆ; ಅಂತೆಯೇ ಬೌದ್ಧ ಮತ್ತು ಜೈನ ತಾತ್ವಿಕ ಗ್ರಹಿಕೆಗಳಲ್ಲೂ ಭಿನ್ನತೆಯುಂಟು. ಯಾವ ದಾರ್ಶನಿಕ ಪಂಥವೂ ನೀತಿಬೋಧನೆಯನ್ನು ತತ್ತ್ವಶಾಸ್ತ್ರದ ಅವಿಚ್ಛಿನ್ನ ಭಾಗವೆಂದು ಪ್ರತಿಪಾದಿಸಿಲ್ಲ. ಆದ್ದರಿಂದ ಅನೇಕ ಭಾರತೀಯ ತತ್ತ್ವಶಾಸ್ತ್ರಗಳನ್ನು ಕುರಿತು ಹೇಳಬಹುದೇ ವಿನಾ ಒಂದು ತತ್ತ್ವಶಾಸ್ತ್ರ ಪ್ರಣಾಲಿಕೆಯ ಬಗೆಗಲ್ಲ. ಎಲ್ಲ ಶಾಖೆಗಳನ್ನೂ ಸಮಗ್ರವಾಗಿ ಪರಿಚಯಿಸಿಕೊಟ್ಟು, ಮೂಲಭೂತ ಅಂಶಗಳಾದ ಪ್ರಮಾಣ, ವಿಶ್ವದ ಅಸ್ತಿತ್ವ, ಪರಮಾಣುವಾದ, ಈಶ್ವರನ ಇರುವಿಕೆ, ಮುಂತಾದುವನ್ನು ಕುರಿತಂತೆ ವಿವಿಧ ಶಾಖೆಗಳ ದೃಷ್ಟಿಕೋನ ಮತ್ತು ಧೋರಣೆಗಳನ್ನು ಸರಳವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಸಿಕೊಡುವ ಗ್ರಂಥ ಇದು. ಇದನ್ನು ಅಧಿಕೃತ ಕೈಪಿಡಿ ಎನ್ನಲಡ್ಡಿಯಿಲ್ಲ.
4, ಪ್ರಾಚೀನ ಗ್ರೀಸಿನಲ್ಲಿ ತತ್ತ್ವಶಾಸ್ತ್ರ (ಭಾಗ - 4) ಯೂರೋಪಿನ ಸಾಹಿತ್ಯ, ಸಂಸ್ಕೃತಿ ಮತ್ತು ವೈಜ್ಞಾನಿಕ ಬೆಳವಣಿಗೆ ಕುರಿತು ಹೇಳುವಾಗ ಅವೆಲ್ಲಕ್ಕೂ ಪ್ರಾಚೀನ ಗ್ರೀಸ್ ತೊಟ್ಟಿಲು ಎನ್ನುವುದುಂಟು. ಆದರೆ ಮತಧರ್ಮದ ವಿಚಾರಕ್ಕೆ ಬಂದರೆ ಯಹೂದಿ ಮತ್ತು ಕ್ರೈಸ್ತ ಮತಗಳು ಪ್ರಾಚೀನ ಗ್ರೀಸಿನ ಮತವನ್ನು ಪೂರ್ತಿಯಾಗಿ ನಿರಾಕರಿಸಿವೆ. ಇತಿಹಾಸದ ಶಿಸ್ತನ್ನು ಗ್ರೀಸ್ ಅಪಾರವಾಗಿ ಬೆಳೆಸಿಕೊಂಡಿತ್ತು. ಆದರೂ ಪ್ರಾಚೀನ ಗ್ರೀಸಿನ ತತ್ತ್ವಶಾಸ್ತ್ರವನ್ನು ನಿರೂಪಿಸುವಾಗ ಅಂದಿನ ಚಾರಿತ್ರಿಕ ಸನ್ನಿವೇಶವನ್ನು ಗೌಣವಾಗಿಸಿ, ಪ್ರತಿಪಾದನೆಗಳನ್ನು ಸ್ವಯಮುತ್ಪಾದಿತ ಎನ್ನುವಂತೆ ಚಿತ್ರಿಸುವುದು ರೂಢಿಯಾಗಿಹೋಗಿತ್ತು. ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲ್ ಗುಲಾಮಿ ವ್ಯವಸ್ಥೆಯ ಕಾಲದಲ್ಲಿದ್ದವರು, ಅದನ್ನು ಬೆಂಬಲಿಸಿದ್ದವರು. ಅದನ್ನು ಮರೆತು ಅವರ ದಾರ್ಶನಿಕ ಕೊಡುಗೆಗಳನ್ನು ಅರ್ಥೈಸಲಾಗದೆಂದು ಹೇಳಿ ಜಾರ್ಜ್ ಥಾಮ್ಸನ್, ಬೆಂಜಮಿನ್ ಫ್ಯಾರಿಂಗ್‌ಟನ್ ಮೊದಲಾದವರು ಗ್ರೀಸಿನ ತತ್ತ್ವಶಾಸ್ತ್ರದ ಇತಿಹಾಸಕ್ಕೆ ಅನನ್ಯವಾದ ತಿರುವು ಕೊಟ್ಟರು. ಅಯೋನಿಯಾದ ಪಂಥ, ಥೇಲಿಸ್, ಹೆರಾಕ್ಲಿಟಿಸ್, ಡೆಮಾಕ್ರಿಟಸ್, ಮುಂತಾದವರು ಆರಂಭಿಕ ಹಂತಗಳಲ್ಲಿ ವಿಶಿಷ್ಟ ಚಿಂತನಾ ಪರಂಪರೆಯೊಂದನ್ನು ಪ್ರಾಚೀನ ಗ್ರೀಸಿನಲ್ಲಿ ಬೆಳೆಸಿದ್ದರು.
5, ಬೇಕನ್‌ನಿಂದ ಮಾರ್ಕ್ಸ್‌ನವರೆಗೆಅಮಧ್ಯಾ (ಭಾಗ - 5) ಮಧ್ಯಕಾಲೀನ ಯೂರೋಪಿನಲ್ಲಿ ಚರ್ಚಿನ ಅಗಾಧ ಹಿಡಿತವು ಕರಾಳ ಕೃತ್ಯಗಳಿಗೆ ಎಡೆಮಾಡಿಕೊಟ್ಟಿತ್ತು. ಗೆಲಿಲಿಯೊ, ಬ್ರೂನೊ, ಡೇಕಾರ್ಟ್, ಮುಂತಾದವರು ಅನುಭವಿಸಿದ ಉಪಟಳವು ಅದರ ಪರಿಣಾಮ. ವಿಜ್ಞಾನಿಗಳು ಮತ್ತು ತತ್ತ್ವಶಾಸ್ತ್ರಜ್ಞರು ಅದರಿಂದ ಕಂಗಾಲಾಗಲಿಲ್ಲ. ಬದಲಾಗಿ, ಯೂರೋಪಿನಲ್ಲಿ ಪುನರುಜ್ಜೀವದ ಶಕೆ ಆರಂಭಗೊಂಡಿತು. 16ನೆಯ ಶತಮಾನದ ಬೇಕನ್‌ನಿಂದ ಹಿಡಿದು 19ನೆಯ ಶತಮಾನದ ಮಾರ್ಕ್ಸ್‌ನವರೆಗೆ ಸತತವಾಗಿ ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿ ಹಲವು ವಿಕಾಸಶೀಲ ಪ್ರಕ್ರಿಯೆಗಳ ಜೊತೆಜೊತೆಯಲ್ಲಿ ಸಾಗಿತು. ಎರಡೂ ಕ್ಷೇತ್ರಗಳಲ್ಲಿ ಅಪರಿಮಿತ ಉತ್ಸಾಹ ಮತ್ತು ನಿರಂತರ ಬೆಳವಣಿಗೆ ಕಂಡುಬಂದವು. ಯೂರೋಪಿನ ಇತಿಹಾಸದಲ್ಲಿ ಅತಿಮುಖ್ಯವಾದ ಘಟ್ಟ ಇದು.
6, ಹೆಗೆಲ್ ನಂತರದ ಯೂರೋಪಿನಲ್ಲಿ ತತ್ತ್ವಶಾಸ್ತ್ರ (ಭಾಗ -6) 19ನೆಯ ಶತಮಾನದ ತತ್ತ್ವಶಾಸ್ತ್ರವು ಯೂರೋಪಿನ ಇತಿಹಾಸದಲ್ಲಿ ಒಂದು ಸ್ಥಿತ್ಯಂತರದ ಕಾಲ. ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿಗಳಲ್ಲಿ ಹತ್ತಾರು ನೂತನ ಪ್ರಭೇದಗಲು ಅಸ್ತಿತ್ವಕ್ಕೆ ಬಂದು ತತ್ತ್ವಶಾಸ್ತ್ರದ ಪರಿಧಿಯನ್ನು ಹಿಗ್ಗಿಸಿದವು. ಬರ್ಗ್‌ಸನ್, ಬ್ರಾಡ್ಲಿ, ಕ್ರೋಚೆ, ಡ್ಯೂಯಿ, ಜೆಂಟೀಲೆ, ವಿಲಿಯಂ ಜೇಮ್ಸ್, ಜಾರ್ಜ್ ಮೂರ್, ಬರ್ಟ್ರಂಡ್ ರಸೆಲ್, ಮುಂತಾದ ಘಟಾನುಘಟಿಗಳು ತಮ್ಮ ವಿಭಿನ್ನ ದಾರ್ಶನಿಕ ನೋಟಗಳನ್ನು ದಾಖಲಿಸಿದ ಯುಗ ಇದು. ಅವರೆಲ್ಲರ ಅನನ್ಯ ಮತ್ತು ಪ್ರತ್ಯೇಕ ಚಿಂತನೆಗಳನ್ನು ತಿಳಿಯದೆ 20ನೆಯ ಶತಮಾನದ ಯೂರೋಪಿನ ತತ್ತ್ವಶಾಸ್ತ್ರದ ಬೆಳವಣಿಗೆಗಳನ್ನು ಗುರುತಿಸುವುದು ಕಷ್ಟಸಾಧ್ಯ. ಜಟಿಲವಾದ ಸಿದ್ಧಾಂತಗಳನ್ನು ಹೃದ್ಯವಾಗುವಂತೆ ನಿರೂಪಿಸುವ ಕೃತಿ ಇದು. ಮಾರ್ಕ್ಸ್‌ನ ಅತಿಮುಖ್ಯವಾದ ‘ಅನ್ಯಾಕ್ರಾಂತತೆ’ಯ ಪರಿಕಲ್ಪನೆಯನ್ನು ವಿವರಿಸಲು ಒಂದು ಅಧ್ಯಾಯ ಮೀಸಲಾಗಿದೆ ಕೂಡ.
7, ಇಪ್ಪತ್ತನೇ ಶತಮಾನದ ತತ್ತ್ವಶಾಶ್ತ್ರ (ಭಾಗ -7) ಇಪ್ಪತ್ತನೆಯ ಶತಮಾನದಲ್ಲಿ ಯೂರೋಪ್ ಕಂಡ ತತ್ತ್ವಶಾಸ್ತ್ರ ಪ್ರತಿಪಾದಕರಲ್ಲಿ ರಸೆಲ್, ವಿಡ್ಗೆನ್‌ಸ್ಟೈನ್, ಸಾರ್ತ್ರ್, ರೈಲ್, ಏಯರ್, ಮೊದಲಾದವರು ಪ್ರಮುಖರು ಮತ್ತು ಬೇರೆಬೇರೆ ಪಂಥಗಳ ಪ್ರವರ್ತಕರು. ಪ್ರಾಯೋಗಿಕ ಜೀವನವನ್ನು ಸಾರಾಸಗಟಾಗಿ ನಿರಾಕರಿಸದೆಯೂ ಇವರಲ್ಲಿ ಕೆಲವರು ಪ್ರಪಂಚದ ಅಸ್ತಿತ್ವವನ್ನು ಕುರಿತಂತೆ ಸಂಶಯ ವ್ಯಕ್ತಪಡಿಸಿದವರು. ಎಷ್ಟೋ ವೇಳೆ ಅವರು ಭಾಷೆಯ ಪ್ರಯೋಗ ಮತ್ತು ವಿಶ್ಲೇಷಣೆಗಳನ್ನಾಧರಿಸಿ ವಿಶ್ವದ ಸಂಗತಿ ಮತ್ತು ಸತ್ಯತೆಗಳ ಬಗ್ಗೆ ದಾರ್ಶನಿಕ ಸಿದ್ಧಾಂತಗಳನ್ನು ರೂಪಿಸಿಬಿಡುತ್ತಾರೆ. ಶತಮಾನದ ಅತ್ಯಂತ ಪ್ರಭಾವಿ ತತ್ತ್ವಶಾಸ್ತ್ರ ಪ್ರಣಾಲಿಕೆಯೆಂದರೆ ಸಾರ್ತ್ರ್ ಪ್ರಣೀತ ಅಸ್ತಿತ್ವವಾದ. ಬೇರಾವುದೇ ಪಂಥಕ್ಕಿಂತಲೂ ಹೆಚ್ಚಿನ ವ್ಯಾಪಕತೆ ಈ ತತ್ತ್ವಶಾಸ್ತ್ರಕ್ಕಿದೆ. ಎಲ್ಲ ಸಿದ್ಧಾಂತಗಳನ್ನು ಸೂಕ್ಷ್ಮವಾಗಿ ಪರಿಚಯಿಸಿ ಪರಾಮರ್ಶಿಸುವ ಉಪಯುಕ್ತ ಪ್ರತಿಪಾದನೆ ಈ ಗ್ರಂಥದಲ್ಲಿದೆ. ಕನ್ನಡದಲ್ಲಿ ಇಂತಹ ಗ್ರಂಥಗಳು ಅತಿವಿರಳ.
8, ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ (ಭಾಗ -8) ತತ್ತ್ವಶಾಸ್ತ್ರದ ಉಗಮ ಮತ್ತು ವಿಕಾಸದ ಇತಿಹಾಸ ಏನೇ ಇರಲಿ ಅದರ ಅಧ್ಯಯನದ ಮೂಲ ಉದ್ದೇಶವಾದರೂ ಏನು? ಬೌದ್ಧಿಕ ಪಾಂಡಿತ್ಯವನ್ನು ಹೆಚ್ಚಿಸಿಕೊಳ್ಳುವುದೆ, ಪ್ರವಚನಗಳನ್ನು ನೀಡುವುದೆ, ಸೂಕ್ಷ್ಮ ವಿಶ್ಲೇಷಣೆಗಳಲ್ಲಿ ಪಾರಂಗತರಾಗುವುದೆ? ಅಥವಾ ಇವೂ ಸೇರಿದಂತೆ ವ್ಯಕ್ತಿ ಮತ್ತು ಸಮಷ್ಟಿಯ ಜೀವನ ವಿಧಾನ ಮತ್ತು ಮೌಲ್ಯಗಳನ್ನು ಸಮುದಾಯದ ಉನ್ನತ ವಿಕಾಸ ಹಾಗೂ ಒಳಿತಿನ ಸಾಧನೆಗಾಗಿ ರೂಪಿಸಿಕೊಳ್ಳುವುದಕ್ಕೊ? ಕೂದಲು ಸೀಳುವ ವಿದ್ವತ್ತು ಅನಾದರಣೆಗೆ ಪಾತ್ರವಾಗಬಾರದು; ಅಂತೆಯೇ ಅದು ವಿದ್ವತ್ತಿನ ಮಟ್ಟಿಗೆ ಸೀಮಿತವೂ ಆಗಬಾರದು. ತತ್ತ್ವಶಾಸ್ತ್ರವು ನಿಜ ಜೀವನದಲ್ಲಿ ಸಾಂಗತ್ಯ ಉಂಟುಮಾಡಲು ಶಕ್ತವಾಗಬೇಕು, ಆಗಲೇ ಅದರ ಮೌಲಿಕತೆಯು ಶ್ರೇಷ್ಠವೆನಿಸಿಕೊಳ್ಳುವುದು. ಮಾಲಿಕೆಯ ಈ ಕಡೆಯ ಸಂಪುಟವು ಸಮಕಾಲೀನ ಸಂದರ್ಭದಲ್ಲಿ ತತ್ತ್ವಶಾಸ್ತ್ರದ ಆನ್ವಯಿಕ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಕುರಿತಾದದ್ದು. ಎಂದೇ ಅದು ಹೆಚ್ಚು ಆಪ್ತವಾಗುವಂಥದು ಹಾಗೂ ಮುಂದಿನ ಜ್ವಲಂತ ಸಮಸ್ಯೆಗಳ ಬಗ್ಗೆ ದರ್ಶನ ಮಾಡಿಸುವಂಥದು. ಪ್ರಕೃತದ ವಿಶ್ವವನ್ನು ಕಣ್ತೆರೆದು ನೋಡಲು ತತ್ತ್ವಶಾಸ್ತ್ರದ ದೃಷ್ಟಿಯೊಂದನ್ನು ನವಿರಾಗು ಮತ್ತು ಕಳಕಳಿಯ ನೆಲೆಯಲ್ಲಿ ಬೆಳೆಸುವುದು ಇಡೀ ಮಾಲಿಕೆಯ ಆಶಯ. ಅಧ್ಯಯನದ ಪ್ರಾಯೋಗಿಕ ಅನ್ವಯಕ್ಕೆ ಸೂಚನೆಗಳು ಇಲ್ಲಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.