Your cart is empty now.
ಸ್ಥಳಗಳು ಮನುಷ್ಯರ ಹಾಗೆ ಸಾಯುವುದಿಲ್ಲ; ಆದರೆ ಅವು ಎಷ್ಟು ಸಮಗ್ರವಾಗಿ ಪರಿವರ್ತನಗೊಳ್ಳುತ್ತವೆಯೆಂದರೆ ಒಂದು ಕಾಲದಲ್ಲಿ ಒಂದೊಂದು ಕಡೆ ಇದ್ದು ಪ್ರಸಿದ್ದಿ ಪಡೆದಿದ್ದ ಎಲ್ಲವೂ ಕಾಲಕ್ರಮೇಣ ಮರೆವಿಗೆ ಸರಿದುಬಿಡುತ್ತವೆ. ಇಲ್ಲಿ ನೆನಪಿಸಿಕೊಳ್ಳಲಾಗಿರುವ ಲಂಡನ್ ಒಂದು ನಗರ. ಇದು ಪ್ರಾಚೀನತೆ ಆಧುನಿಕತೆಗಳ ವಿರೋಧಾಭಾಸವಾಗಿರುವ, ಜನಜಂಗುಳಿಯ ಮಾರುಕಟ್ಟೆಗಳ ಹಾಗೂ ಅತ್ಯಂತ ಪ್ರಶಾಂತ ಪಾರ್ಕುಗಳ, ಅರಮನೆಗಳ ಮತ್ತು ಪಬ್ಬುಗಳ ಮಹಾನಗರ ಈ ನಗರದಲ್ಲಿ ಹಿಂದೊಮ್ಮೆ ವಾಸಿಸಿದ್ದ ಭಾರತದ ಮತ್ತು ಇತರ ದೇಶಗಳ ಸ್ವಾತಂತ್ರ್ಯ ಹೋರಾಟಗಾರರು. ತತ್ವಜ್ಞಾನಿಗಳು, ವಿದ್ವಾಂಸರು ಈ ಪುಸ್ತಕದ ಪುಟಪುಟಗಳಲ್ಲಿ ನಡೆದಾಡಿದ್ದಾರೆ. ಲಂಡನ್ನಿನಲ್ಲಿ ಇತಿಹಾಸಪ್ರಸಿದ್ದರು ವಾಸಿಸಿದ್ದ ಕಟ್ಟಡಗಳ ಮುಂದೆ 'ಬ್ಲೂ ಪ್ಲೇಕ್' ಅಥವಾ ನೀಲಿ ಫಲಕ ಸ್ಥಾಪಿಸುವುದೊಂದು ಪರಂಪರೆ ಆ ಫಲಕದಲ್ಲಿ ಹಿಂದೊಮ್ಮೆ ಅಲ್ಲಿ ವಾಸಿಸಿದ್ದ ವ್ಯಕ್ತಿಯ ಹೆಸರು, ಅವನ ಜೀವಮಾನ, ಅವನ ಸಾಧನೆಯ ಕ್ಷೇತ್ರ ಇತ್ಯಾದಿ ವಿವರಗಳಿರುತ್ತವೆ. ಹಾಗೆ ನೋಡಿದರೆ, ಆ ಒಂದೊಂದು ನೀಲಿ ಫಲಕದ್ದೂ ಒಂದೊಂದು ಕತೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕಾರಣಗಳಿಂದಾಗಿ ಕೆಲವರು ದೀರ್ಘಕಾಲ, ಇನ್ನು ಕೆಲವರು ಸ್ವಲ್ಪ ಕಾಲ ಲಂಡನ್ನಿನಲ್ಲಿ ವಾಸ ಮಾಡಿದ್ದುಂಟು. ಆದರೆ ಎಲ್ಲರೂ ತಮ್ಮ ಪ್ರಭಾವೀ ವ್ಯಕ್ತಿತ್ವದಿಂದ, ವೈಯಕ್ತಿಕ ವರ್ಚಸ್ಸಿನಿಂದ. ಭವಿತವ್ಯದ ಸಾಧನೆಗಳಿಂದ ಇತಿಹಾಸದ ಪುಟಗಳನ್ನು ಸೇರಿಹೋದವರು. ಅರಬಿಂದೊ ಘೋಷ್. ರಾಜಾರಾಮಮೋಹನ ರಾಯ್. ಸರ್ ಸಯ್ಯದ್ ಅಹಮದ್ ಖಾನ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಬಾಲಗಂಗಾಧರ ತಿಲಕ್, ದಾದಾಭಾಯಿ ನವರೋಜಿ, ಬಿ.ಆರ್. ಅಂಬೇಡ್ಕರ್, ವಿ.ಕೆ. ಕೃಷ್ಣ ಮೆನನ್, ಹೀಗೆ ಅನೇಕ ಮಂದಿ ಭಾರತೀಯರಲ್ಲದೆ ವಿನ್ಸ್ಟನ್ ಚರ್ಚಿಲ್, ಚಾರ್ಲ್ಸ್ ಡಿಕನ್ಸ್, ಕಾರ್ಲ್ ಮಾರ್ಕ್ಸ್, ಫ್ಲಾರೆನ್ಸ್ ನೈಟಿಂಗೇಲ್, ಚಾರ್ಲಿ ಚಾಪ್ಲಿನ್ ಮೊದಲಾದವರೂ ಲಂಡನ್ನಿನಲ್ಲಿ ವಾಸವಾಗಿದ್ದವರು. ಇಂಥ ನಗರದ ಕತೆಯನ್ನು ಸೂಚ್ಯವಾಗಿ, ಧ್ವನಿಪೂರ್ಣವಾಗಿ ನಿರೂಪಿಸಬಯಸುವ ಲೇಖಕನಿಗೆ ಇತಿಹಾಸದ, ಅಪೂರ್ವ ಸಾಹಸಿಗಳ, ರಾಜಕೀಯ, ಕಲೆ, ಸಂಸ್ಕೃತಿಗಳ ಜ್ಞಾನವಿರಬೇಕು ಇವೆಲ್ಲವೂ ಧಾರಾಳವಾಗಿರುವ ಯೋಗೀಂದ್ರ ಮರವಂತೆ ನಮ್ಮ ಕಾಲದ ಶಕ್ತ ಲೇಖಕರಲ್ಲಿ ಒಬ್ಬರು. ಅವರ ಬರವಣೆಗೆಯಲ್ಲಿ ಪ್ಯಾಷನ್ ಇದೆ. ಸೂಕ್ಷ್ಮ ನಿರೀಕ್ಷಣಾ ಶಕ್ತಿಯಿದೆ. ಐತಿಹಾಸಿಕ ವ್ಯಕ್ತಿಗಳ ಸಂಕೀರ್ಣತೆಗೆ ಸೂಕ್ತವಾದ ಶೈಲಿಯಿದೆ. ನೀಲಿ ಫಲಕದ ನೆವದಲ್ಲಿ ಮಹಾ ವ್ಯಕ್ತಿಗಳನ್ನು ಚಿತ್ರಿಸುವ ಇಲ್ಲಿನ ಸುಂದರ ನುಡಿಚಿತ್ರಗಳನ್ನು ಅವಲೋಕಿಸಿದಾಗ ನಮ್ಮಲ್ಲ ಅಂಥ ಮಹಾ ಸಾಧಕರ ನೆನಪನ್ನು ಚಿರಸ್ಥಾಯಿಗೊಳಿಸುವ ಪರಿಪಾಟ ಇಲ್ಲವೇ ಇಲ್ಲವಲ್ಲ ಎಂದು ಹಳಹಳಿಸುವಂತಾದರೆ ಆಶ್ಚರ್ಯವಿಲ್ಲ.
ಗತಕಾಲದ ಕುರುಹುಗಳ ಆತ್ಮೀಯ ಚಿತ್ರವಾಗಿರುವ ಹಾಗೆಯೇ ಕನ್ನಡದಲ್ಲಿ ತೀರ ಅಪರೂಪವವೂ ಆಗಿರುವ ಪುಸ್ತಕವಿದು.
ಎಸ್.ದಿವಾಕರ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.