Your cart is empty now.
ಗೆಳೆಯ ಡಾ.ಐ.ಜೆ.ಮ್ಯಾಗೇರಿಯವರ ಜೈಲುಕತೆಗಳನ್ನು ಓದುವಾಗ ನನಗೆ ಚೆಕಾವ್ನ ಕಥೆ ನೆನಪಿಗೆ ಬಂದಿತು. ಹಣಕ್ಕಾಗಿ ಅಣ್ಣನನ್ನೇ ಕೊಂದ ತಮ್ಮನ ಕತೆಯನ್ನು ಓದುವಾಗಲಂತೂ ಚೆಕಾವ್ನ ಕತೆಯು ಬೇರೊಂದು ಬಗೆಯಲ್ಲಿ ತಿರುವು ಪಡೆದಿದೆ ಎಂದು ಅನಿಸಿತು. ನಮ್ಮ ಸಮಾಜದ ಸಂಕಟಗಳಿಗೆ ಅತಿ ಸಮೀಪದರ್ಶನ ಸಿಗುವುದು ವೈದ್ಯರಿಗೆ, ಪೊಲೀಸರಿಗೆ, ವಕೀಲರಿಗೆ ಮತ್ತು ಜೈಲು ಅಧಿಕಾರಿಗಳಿಗೆ ಎಂದು ಕಾಣುತ್ತದೆ. ತಮಗೆ ಸೇವಾವಧಿಯಲ್ಲಿ ಭೇಟಿಯಾದ `ಅಪರಾಧಿ’ಗಳನ್ನು, ಅವರಿಂದ ಪಡೆದ ಅನುಭವವನ್ನು ಮ್ಯಾಗೇರಿಯವರು ಇಲ್ಲಿ ನಿರೂಪಿಸಿಕೊಂಡಿದ್ದಾರೆ. ಇದೊಂದು ಕನ್ನಡದಲ್ಲಿ ವಿಶಿಷ್ಟ ಪುಸ್ತಕವಾಗಿದೆ. ಇದು ಕೈದಿಗಳ ಹಿನ್ನೆಲೆಯಲ್ಲಿ ಅಡಗಿರುವ ಅಸಹಾಯಕತೆ, ದಾರುಣ ಬದುಕು ಮತ್ತು ಕ್ರೌರ್ಯಗಳನ್ನು ಶೋಧಿಸುತ್ತದೆ. ಇದನ್ನು ಓದುವಾಗ ಬದುಕು ಇಷ್ಟೊಂದು ಕ್ರೂರವಾಗಿರಲು ಸಾಧ್ಯವೇ ಎಂದು ಸೋಜಿಗವೂ ಗಾಬರಿಯೂ ಆಗುತ್ತದೆ.
ವಿಶೇಷವೆಂದರೆ, ಲೇಖಕರು ತಮ್ಮ ಅನುಭವವನ್ನು ನಿರೂಪಿಸುತ್ತ ಕಟ್ಟಿರುವ ಈ ಕಥನವು ಚಿಂತನೆಯಾಗಿ ರೂಪಾಂತರಗೊಂಡಿದೆ. ಈ ಚಿಂತನೆಯಲ್ಲಿ ಬದುಕಿನ ಪ್ರೀತಿಯೂ, ಚಂದವಾಗಿದ್ದ ಬದುಕು ಹೀಗೆ ತಿರುವು ಪಡೆಯಿತಲ್ಲ ಎಂಬ ವೇದನೆಯೂ, ವ್ಯಕ್ತಿಗಳ ಭಾವನೆಗಳ ಬಗ್ಗೆ ಮಾನವೀಯ ಕಾಳಜಿಯೂ ಇದೆ. ಇಲ್ಲಿ ಅಪರಾಧ ಸುದ್ದಿಯನ್ನು ಓದುಗರಿಗೆ ಪ್ರೇಕ್ಷಕರಿಗೆ ಉಣಬಡಿಸುವ ಪೀತಪತ್ರಿಕೆ ಹಾಗೂ ಕ್ರೈಂ ಧಾರಾವಾಹಿಗಳ ರೋಚಕತೆ ಕಾಣದು. ಬದಲಿಗೆ ವಿದ್ಯಮಾನಗಳ ಹಿಂದಿರುವ ದುರಂತ ಪ್ರಜ್ಞೆಯ ಹುಡುಕಾಟವಿದೆ. ಹೀಗಾಗಿ ಇದು ಘಾತಕ ಅನುಭವಗಳ ಸರಮಾಲೆಯಾಗದೆ, ಅವುಗಳ ಮೂಲಕ ಜೀವನತತ್ವ ಶೋಧಿಸುವ ದಾರ್ಶನಿಕ ಕೃತಿಯಾಗಲು ಹವಣಿಸಿದೆ.
- ರಹಮತ್ ತರೀಕೆರೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.