ಲೇಖಕರು: ಜೋಗಿ, Jogi
ನನಗೆ ಕವಿತೆಗಳೆಂದರೆ ಪ್ರಾಣ.
ಅರ್ಥವಾಗದ ಕವಿತೆಗಳೆಂದರೆ ಅತೀವ ಅಕ್ಕರೆ.
ಒಂದು ಜನ್ಮ ಕಳೆಯಲಿಕ್ಕೆ ಪೂರ್ತಿ ಅರ್ಥವಾಗದ ನಾಲ್ಕೈದು ಕವಿತೆಗಳು ಸಿಕ್ಕರೂ ಸಾಕು. ಅರ್ಥ ಹುಡುಕುತ್ತಾ ಇದ್ದುಬಿಡಬಹುದು.
ಕವಿತೆಯ ಅನುರಾಗಿ ಆಗಿದ್ದರಿಂದಲೇ ನಾನು ಕವನ ಬರೆಯಬಾರದು ಅಂದುಕೊಂಡಿದ್ದೆ. ಆದರೆ ಕೆಲವೊಮ್ಮೆ ನಮ್ಮ ಕೈಮೀರಿ ತಪ್ಪುಗಳು ನಡೆದುಹೋಗುತ್ತದೆ. ಅಂಥ ಆಕಸ್ಮಿಕ ಅಪಘಾತಗಳ ಫಲ ಈ ಪುಸ್ತಕದಲ್ಲಿದೆ.
ಕವಿತೆಗಳನ್ನು ಬರೆದ ತಕ್ಷಣ ಕವಿಯಾದೆ ಅಂದುಕೊಳ್ಳಬಾರದು ಎಂಬ ಪಾಠವನ್ನು ಕೂಡ ಕವಿತೆಯೇ ನನಗೆ ಕಲಿಸಿದೆ. ಹೀಗಾಗಿ ಇವನ್ನು ನಾನು ನನ್ನ ಅಭ್ಯಾಸದ ಪುಟಗಳೆಂದೇ ಭಾವಿಸಿದ್ದೇನೆ. ಕವಿತೆಯ ಜತೆಗಿನ ಐವತ್ತು ವರುಷಗಳ ಅನುಸಂಧಾನದಲ್ಲಿ ನನ್ನನ್ನು ಕಂಗೆಡಿಸಿದ, ಕಾಪಾಡಿದ, ಸಂಕಟದ ಕ್ಷಣಗಳಲ್ಲಿ ಭರವಸೆಯ ಬೆಳಕು ಕೊಟ್ಟ ನೂರಾರು ಕವಿತೆಗಳು ಈಗಲೂ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿವೆ.
ಈ ಕವನ ಸಂಕಲನವನ್ನು ನಾನು ಓದಿದ ಮಹಾಕವಿತೆಗಳಿಗೆ ಅರ್ಪಿಸುತ್ತೇನೆ.
ಮತ್ತೊಮ್ಮೆ ಹೇಳುತ್ತೇನೆ, ನಾನು ಕವಿಯಲ್ಲ.
ನಾನು ಕವಿಯಾದರೆ, ಇವು ಕವಿತೆಗಳೇ ಅಲ್ಲ!