ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ ಸ್ಪಂದನಗಳನ್ನು ಕಟ್ಟಿಕೊಡುವ ಹಂಬಲ ಕಾದಂಬರಿಯ ಜೀವದ್ರವ್ಯವಾಗಿದೆ.
ಅತ್ಯಂತ ಕಡಿಮೆ ಪಾತ್ರಗಳನ್ನು ಬಳಸಿಕೊಂಡು ಕಥನವನ್ನು ನಿರೂಪಿಸಿರುವುದು ಕಾದಂಬರಿಯ ಗಮನಾರ್ಹ ಸಂಗತಿಗಳಲ್ಲೊಂದು. ಮಕ್ಕಳ ಕಣ್ಣಿನಿಂದ ಸಮಾಜವನ್ನು ನೋಡುವ, ಚಿತ್ರಿಸುವ ತಂತ್ರವನ್ನು ದೊಡ್ಡನಿಂಗಪ್ಪ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಅಪಾರ ಜೀವನೋತ್ಸಾಹ ಮತ್ತು ಮುಗ್ಧತೆಯನ್ನು ಒಳಗೊಂಡ ತ್ಯಾಗನ ಕಣ್ಣುಗಳ ಮೂಲಕ ಊರಿನ ಜಾತೀಯತೆಯ ಸ್ವರೂಪವನ್ನು ಕಾದಂಬರಿ ಕಟ್ಟಿಕೊಡುತ್ತದೆ.
ದೊಡ್ಡನಿಂಗಪ್ಪ ಮೂಲತಃ ಕವಿ. 'ಚಂದ್ರನ ಚೂರು' ಕಾದಂಬರಿಯಲ್ಲೂ ದೊಡ್ಡನಿಂಗಪ್ಪ ಕವಿಯಾಗಿದ್ದಾರೆ. ರೂಪಕಗಳ ಮೂಲಕ ಗ್ರಾಮೀಣ ಭಾರತದ ಸಾಮಾಜಿಕ ಬಿಂಬಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ಪ್ರಾಣಿಪಕ್ಷಿಗಳನ್ನೂ, ನಿಸರ್ಗವನ್ನೂ, ಜಡವಸ್ತುಗಳನ್ನೂ ತಮ್ಮ ಜೊತೆಗೆ ಕಥೆ ಹೇಳಲು ಕೂರಿಸಿಕೊಂಡಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅಪಸವ್ಯಗಳನ್ನು ಸಹೃದಯರ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಬಾವಿಯ ನೀರನ್ನು ಗಾಳಿ ಬೆಳಕಿಗೊಡ್ಡುವ ಈ ಕೆಲಸ ಪರಿಣಾಮಕಾ- ರಿಯಾಗಿದೆ, ಯಶಸ್ವಿಯಾಗಿದೆ ಹಾಗೂ ಕಾದಂಬರಿಕಾರರಾಗಿ ದೊಡ್ಡನಿಂಗಪ್ಪನವರ ಸಾಧ್ಯತೆಗಳ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ ಹುಟ್ಟಿಸುತ್ತದೆ. ಸಹೃದಯರು ಪ್ರೀತಿಯಿಂದ ಸ್ವಾಗತಿಸಬೇಕಾದ ಹಾಗೂ ಓದಿ ಚರ್ಚಿಸಬೇಕಾದ ಕೃತಿಯಿದು.
-ರಘುನಾಥ ಚ.ಹ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.