ಕಾದಂಬರಿಯಲ್ಲಿ ಭರತನದು ಅನನ್ಯ ವ್ಯಕ್ತಿತ್ವ, ಆತ ಏಕಕಾಲಕ್ಕೆ ಸ್ತ್ರೀ ಮತ್ತು ಪುರುಷ ಇಬ್ಬರ ಲೋಕದೊಳಗೂ ಸಲೀಸಾಗಿ ಸಂವಹನ ಮಾಡಬಲ್ಲ ಕುಶಲಿ (ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಕಾದಂಬರಿಯ ಚಂದ್ರಪ್ಪನಂತಹ ವ್ಯಕ್ತಿತ್ವ). ಈ ಎರಡೂ ಲೋಕಗಳು ಪರಸ್ಪರ ಹತ್ತಿರದಲ್ಲೇ ಬದುಕಿದ್ದರೂ ಒಂದು ಇನ್ನೊಂದಕ್ಕೆ ಅನ್ಯವಾಗಿ ಉಳಿದಿರುವುದು ಜೀವನದ ಚೋದ್ಯ. ಹೀಗೆ ಸಮಾನಾಂತರವಾಗಿ ಆದರೆ ಸ್ವಾಯತ್ತವಾಗಿ ಉಳಿದ ಈ ಲೋಕಗಳೊಳಗೆ ಸಲೀಸಾಗಿ ಪ್ರವೇಶಿಸಲು ಯಾರಿಗೇ ಆಗಲಿ ವಿಶಿಷ್ಟವಾದ ಕೌಶಲ್ಯವು ಅಗತ್ಯ. ಅದು ಭರತನಿಗೆ ದಕ್ಕಿದ್ದು ಕೂಡ ತುಂಬಾ ಸಾಂಕೇತಿಕವಾಗಿ, ಆದರೆ ಸಹಜವಾಗಿ! ಅಜ್ಜಿಯ ಮನೆಯ ಹೆಣ್ಣಾಳಿಕೆಯನ್ನು ಎಳವೆಯಿಂದಲೇ ಕಂಡ ಭರತನು ಬೆಳೆದಂತೆ ತಂದೆ ಮನೆಯ ಗಂಡಾಳಿಕೆಯನ್ನೂ ಎದುರುಗೊಂಡ ಎರಡರ ಅನುಕೂಲ-ಅನನುಕೂಲ, ಸಾಧನೆ-ಸಾಧ್ಯತೆ, ಸಾರ್ಥಕತೆ-ನಿರರ್ಥಕತೆಗಳು ಭರತನಿಗೆ ಅಂಗೈನೆಲ್ಲಿಯಂತೆ ದೃಗ್ಗೋಚರ. ಆದುದರಿಂದಲೇ ಆತನಿಗೆ ಮಾಂಡವಿ, ಶ್ರುತಕೀರ್ತಿ, ಊರ್ಮಿಳೆ, ಕೌಸಲ್ಯ, ಸುಮಿತ್ರೆ ಮತ್ತು ತಾಯಿ ಕೈಕೆಯೊಂದಿಗೆ ಸಂವಹನ ಸಾಧ್ಯವಾದಂತೆ ವಸಿಷ್ಠ, ಜಾಬಾಲಿ ಮುಂತಾದ ಮುನಿಗಳು, ಮಂತ್ರಿಗಳು, ಸೈನಿಕರು, ಪ್ರಜೆಗಳು ಹೀಗೆ ಎಲ್ಲರೊಡನೆಯೂ ಸಂವಹನ ಸಾಧ್ಯವಾಗಿದೆ; ಅವರೆಲ್ಲರ ಕನಸು-ಚಿಂತನೆ-ಲೋಕಗ್ರಹಿಕೆಗಳ ವಿನ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ಕೈಕೆಗೆ ಇದು ಸಾಧ್ಯವಾಗದೇ ಇದ್ದುದೆ ಅವಳೆಲ್ಲ ದುರಂತಗಳ ಮೂಲ ಎಂಬ ನಿಲುವು, ಗಂಡಾಳಿಕೆಯ ಪ್ರತಿಷ್ಠೆಯ ನಿರರ್ಥಕತೆಯ ತಥ್ಯವು ಕಾದಂಬರಿಯಲ್ಲಿ ಸೂಚಿತವಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.