Your cart is empty now.
ಹೇಮಂತ್ ಲಿಂಗಪ್ಪನವರು ದೊಡ್ಡಬಳ್ಳಾಪುರದ ಹಳ್ಳಿಗಾಡಿನಿಂದ ಬಂದವರು. ಸಹಜವಾಗಿಯೇ ಹಳ್ಳಿ ಜೀವನದ ಏರುಪೇರಿನ ಕಷ್ಟಕಾರ್ಪಣ್ಯಗಳ ನಡುವೆ ಓದಿ ಈಗ ಬೆಸ್ಕಾಂನಲ್ಲಿ ಇಂಜಿನಿಯರ್ ಆಗಿ ವೃತ್ತಿ ಬದುಕನ್ನು ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರದ ಸಾಹಿತ್ಯ, ರಂಗಭೂಮಿ ಒಡೆನಾಟದ ಅನುಭವದಿಂದ ಬಂದ ಇವರು ವೈಟ್ ಕಾಲರ್ ಹುದ್ದೆಗೇರಿದರೂ ಆರಾಮ ಜೀವನ, ಸಂತೃಪ್ತಿ ವಾತಾವರಣದಲ್ಲಿ ಜಡಗೊಳ್ಳದೆ ತಮ್ಮ ಊರು, ಸಮಾಜ ಹಾಗೂ ಮನುಷ್ಯ ಸಂಬಂಧಗಳ ಬಗೆಗೆ ತೀವ್ರ ತುಡಿತ ಹೊಂದಿರುವ ಸಂವೇದನೆಯವರಾಗಿ ಇಷ್ಟವಾಗುತ್ತಾರೆ. ಕ್ರಿಯಾಶೀಲತೆ ಹಾಗೂ ಜೀವಂತಿಕೆಗಾಗಿ ಚಡಪಡಿಸುವ ಮನಸ್ಸು ಮಾತ್ರವೇ ಕಾವ್ಯವನ್ನು ಸೃಜಿಸಬಲ್ಲದು. ಹೇಮಂತ್ ಇವುಗಳ ಬೆನ್ನ ಹಿಂದೆ ಬಿದ್ದಿದ್ದಾರೆ. ತನ್ನ ಕಾಲದ ಮಧ್ಯಮವರ್ಗದ ಟ್ರೆಂಡ್ಗಳು ಹಾಗು ಸುಖಲೋಲುಪತೆಯಲ್ಲಿ ಬಹಳ ಸುಲಭವಾಗಿ ಕರಗಿ ಹೋಗುವವರ ನಡುವೆ ಮನುಷ್ಯ ಮಾತ್ರರಾಗಿ ಉಳಿಯಲು ಧೈರ್ಯವನ್ನು ಪ್ರಕಟಿಸುವ ಇಂಥವರು ನಮ್ಮ ನಡುವೆ ಭಿನ್ನ ಶೃತಿಯ ಭರವಸೆಯಂತಿದ್ದಾರೆ. ಬದುಕನ್ನು ತೀವ್ರತೆಯಿಂದ ಜೀವಿಸುವ ರಮ್ಯಜೀವಿಯಂತೆ ಕಾಣುವ ಇವರು ತನ್ನ ಸುತ್ತಣದ ಕರಾಳ ವಾಸ್ತವವನ್ನು ಕಂಡು ಕನಲುತ್ತಾರೆ. ಈ ಸಮಾಜದ ಸಂಕಟ ಹಾಗೂ ನೋವು ನಲಿವುಗಳನ್ನು ಕಂಡು ಬೆಚ್ಚಿಬೀಳುವ ಇವರು ತನ್ನ ಕಾವ್ಯದ ಮೂಲಕ ಈ ವಿಷವರ್ತುಲಗಳನ್ನು ದಾಟಿ ಮನುಷ್ಯ ಮಾತ್ರರಾಗಿ ಬದುಕುವುದನ್ನಷ್ಟೇ ಹಂಬಲಿಸುತ್ತಾರೆ. ಅಷ್ಟೇ ಅಲ್ಲದೆ ಹೀಗೆ ನಡೆದುಕೊಳ್ಳುವ ಜೀವನದ ದಾರಿಗಳ ಬಗ್ಗೆ ಸದಾ ಯೋಚಿಸುವವರಾಗಿದ್ದಾರೆ. ತನ್ನ ಆಂತರ್ಯದಿಂದ ಮಾತು, ಮೌನ ಹಾಗೂ ಕಾವ್ಯ, ವೈಚಾರಿಕತೆಯನ್ನು ಪ್ರಕಟಿಸುವವರು ಮಾತ್ರ ಒಳ್ಳೆ ಕವಿಯಾಗುವುದರ ಜೊತೆಗೆ ಆಳದಲ್ಲಿ ಅಪ್ಪಟ ಮನುಷ್ಯ ಮಾತ್ರರಾಗಿರಲು ಸಾಧ್ಯವಾಗುತ್ತದೆ. ಹೇಮಂತ್ ರವರ ವ್ಯಕ್ತಿತ್ವ ಮತ್ತು ಕಾವ್ಯ ಈ ದಿಸೆಯಲ್ಲಿ ಆಕರ್ಷಣೆ ಹುಟ್ಟಿಸುತ್ತದೆ. ಈ ಕಾರಣಕ್ಕಾಗಿಯೇ ಇವರ ಕವಿತನಕ್ಕೆ ವ್ಯಕ್ತಿ ವೈಶಿಷ್ಟತೆ ಇದೆ ಎಂದು ಹೇಳಬಹುದು.
ತನ್ನ ಕಾಲದ ಸಾಮಾಜಿಕ ಕೇಡು ಮತ್ತು ಬದುಕಿನ ವಿಷಣ್ಣತೆಗಳ ನಡುವೆ ತನ್ನ ಕಾವ್ಯವನ್ನು ನಮ್ಮೆಲ್ಲರ ಎದುರು ಎಲ್ಲ ಮನುಷ್ಯರ ಪ್ರೀತಿ, ನಂಬಿಕೆಗಳ ಕಿತಾಬಿನಂತೆ ತೆರೆದಿಡುತ್ತಿರುವ ಹೇಮಂತ್, ಈಗ ತಮ್ಮ ಚೊಚ್ಚಲ ಕವನ ಸಂಕಲನವಾದ ಮತ್ತೆ ಮತ್ತೆ ಮಳೆ ಎಂಬ ಕೃತಿಯನ್ನು ಪ್ರಕಟಿಸುತ್ತಿದ್ದಾರೆ. ಈ ಕವನ ಸಂಕಲನ ನಮ್ಮ ಕಾಲಕ್ಕೆ ಹೊಸ ಭರವಸೆ ಎನ್ನಬಹುದು. ಮೇಲಾಗಿ ಕಾವ್ಯದ ಗಂಭೀರತೆ, ಸಾಮಾಜಿಕ ಬದ್ಧತೆ ಹಾಗೂ ಜೀವನಾನುರಕ್ತಿ ಇವುಗಳ ಸಮ್ಮಿಶ್ರಣದಂತಿರುವ ಇವರ ಕಾವ್ಯ, ಕನ್ನಡ ಕಾವ್ಯಲೋಕದಲ್ಲಿ ತನ್ನದೇ ಆದ ಹೆಜ್ಜೆಗುರುತನ್ನು ಖಂಡಿತ ಮೂಡಿಸುತ್ತದೆ. ಅಭಿನಂದನೆಗಳೊಂದಿಗೆ
ಡಾ. ಪ್ರಕಾಶ್ ಮಂಟೇದ ದೊಡ್ಡಬಳ್ಳಾಪುರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.