Your cart is empty now.
ಭಾರತಿಯ ಬರಹಗಳು ನನಗೆ ಇಷ್ಟವಾಗುವುದು ಅವುಗಳ ಸರಳತೆಗೆ ಮತ್ತು ಓದುತ್ತಾ ಹೋದ ಹಾಗೆ ಅವುಗಳು ಕೊಡುವ ಅಷ್ಟೇನೂ ಸರಳವಲ್ಲದ ಹೊಳಹುಗಳಿಗೆ. ಇದೊಂದು ತರಹ ಕಾಲದ ಕೋಲ್ಮಿಂಚಲ್ಲಿ ಹೊಳೆಯುವ ಕಾಡೊಳಗಿನ ಕಾಲು ದಾರಿಯ ಹಾಗಿರುವ ಬರವಣಿಗೆ. ಮೇಲ್ಮೈ ಮಟ್ಟದಲ್ಲಿ ಸರಳ ಅನಿಸಿದರೂ ಓದುತ್ತಾ ಹೋದ ಹಾಗೆ ಆವರಿಸುವ ನಗು, ನಿಟ್ಟುಸಿರು, ವಿಷಾದ, ಇತಿಹಾಸದ ವ್ಯಂಗ್ಯ ಸತ್ಯಗಳು, ಮನುಷ್ಯ ಜೀವನದ ಅಸಂಗತ ತಮಾಷೆಗಳು ಎಲ್ಲವೂ ದೊಡ್ಡ ಮಟ್ಟದ ಬರವಣಿಗೆಯೊಂದು ದನಿ ಎತ್ತರಿಸಿ ಹೇಳಿದಷ್ಟೇ ಪರಿಣಾಮವನ್ನು ನಿರುದ್ದಿಶ್ಯವಾಗಿ ಹೇಳಿಬಿಡುತ್ತದೆ. ಉದಾಹರಣೆಗೆ ಇಸ್ರೇಲಿನ ಮೃತ ಸಮುದ್ರದ ಕುರಿತ ಬರಹ ಬಹಳ ಸರಳವಾಗಿ ಅಂತಾರಾಷ್ಟ್ರೀಯ ಧಾರ್ಮಿಕ ಸಾಮಾಜಿಕ ರಾಜಕೀಯ ಕ್ರೌರ್ಯವನ್ನು ಒಂದು ಸಣ್ಣ ಕಥೆಯಷ್ಟೇ ಸಣ್ಣದಾಗಿ ಆದರೆ ಗಹನವಾಗಿ ಹೇಳಿಬಿಡುತ್ತದೆ. ಮುಳುಗದ ಉಪ್ಪು ಸಾಗರದಲ್ಲಿ ತೇಲಲು ಹೋದ ಪ್ರವಾಸಿಗರು ಮೈಯೆಲ್ಲಾ ತುರಿಸಿಕೊಂಡು ಒದ್ದಾಡುವ ವಿವರಗಳು ಇತಿಹಾಸದ ಒಂದು ವ್ಯಂಗ್ಯವನ್ನು ಏನೂ ಹೇಳದೆಯೂ ಎಷ್ಟೊಂದು ಹೇಳಿಬಿಡುತ್ತದೆ. ರಷ್ಯಾ ದೇಶಕ್ಕೆ ಪಯಣ ಹೊರಟ ಸೋಮವಾರ ಶನಿವಾರಗಳಂದು ಮಾಂಸಾಹಾರ ಸೇವಿಸದ ದೇಸೀ ಪ್ರವಾಸಿಗಳು, ಮುಖ ನೋಡಲು ಬಿಡದ ಶ್ರೀರಂಗನಿಗೇ ರೋಪು ಹಾಕಿ ಮುಖ ತಿರುಗಿಸಿ ಪ್ರೀತಿ ಕೊಡುವವರ ಹತ್ತಿರ ಹೋಗಬೇಕು, ಮುಖ ತಿರುಗಿಸಿಕೊಳ್ಳುವವರ ಸಹವಾಸ ನಮಗ್ಯಾಕೆ ಎಂದು ವಾಪಾಸಾಗುವ ಲೇಖಕಿ, ಮೈಕೆಲ್ ಏಂಜೆಲೋನನ್ನು ಮೈಕೆಲ್ ಜಾಕ್ಸನ್ ಎಂದು ಬುರುಡೆ ಬಿಡುವ ಕನ್ನಡಿಗ ಕರಿಯಪ್ಪನವರು ಪ್ರವಾಸವೊಂದರ ಸಣ್ಣ ವಿವರಗಳಲ್ಲಿ ಅನಾವರಣಗೊಳ್ಳುವ ಎಷ್ಟೊಂದು ಮನುಷ್ಯ ಮುಖಗಳು ಮತ್ತು ಮುಂದೊಂದು ದಿನ ಕಥೆಯಾಗಬಹುದಾಗದ್ದಿ ಸನ್ನಿವೇಶಗಳು. ಆದರೆ ಭಾರತಿ ಮುಂದೊಂದು ದಿನ ಇವೆಲ್ಲವನ್ನೂ ಬಳಸಬಹುದು ಎಂಬ ದುರಾಸೆಯಿಲ್ಲದೆ ಬಿಡುಬೀಸಾಗಿ ಎಲ್ಲವನ್ನೂ ಇಲ್ಲೇ ಹೇಳುತ್ತಾ ಮುಂದಕ್ಕೆ ಹೋಗಿದ್ದಾರೆ.
ಸಾಯಲು ಹೆದರುವುದಿಲ್ಲ ಎಂದು ಹೇಳುವುದು ಬಹಳ ಸುಲಭ. ಆದರೆ ಕರೆಯಲು ಬಂದದ್ದಿ ಸಾವನ್ನು ಎದುರಿಸಿ ಮುಗುಳ್ನಗುತ್ತಾ ಹೊರಬರುವುದು ಬಹಳ ಗಹನ ವಿಷಯ. ಹಾಗೆ ಬಂದಾದ ಮೇಲೆ ಅದುವರೆಗೆ ಬಹಳ ಘನವಾಗಿ ಕಾಣಿಸುತ್ತದ್ದಿ ಸಂಗತಿಗಳೆಲ್ಲವೂ ಮಕ್ಕಳಾಟದಂತೆ ಕಾಣಿಸುತ್ತವೆ. ಹಾಗೆ ಎದುರಿಸಿ ಬಂದ ಭಾರತಿಯ ಬರವಣಿಗೆಗೆ ಬಂದಿರುವ ಲೋಕದೃಷ್ಟಿ ಇಲ್ಲಿಯ ಎಲ್ಲ ಬರವಣಿಗೆಯಲ್ಲೂ ಇವೆ ಮತ್ತು ಬಹಳ ಸಲೀಸಾಗಿ ಓದಿಸಿಕೊಂಡು ಹೋಗುತ್ತವೆ.
- ಅಬ್ದುಲ್ ರಶೀದ್, ಲೇಖಕರು
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.