Your cart is empty now.
ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ. ಇಲ್ಲವಾದರೆ ಇಲ್ಲ, ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಅದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಂತ ಭಿನ್ನ ಎಂದು ಸಾಬೀತು ಪಡಿಸಿದ್ದರು. ಈಗ ಪ್ರಕಟವಾಗುತ್ತಿರುವ ಕುಂಡದ ಬೇರು ಕಥೆಗಳು' ಸಂಕಲನ ಪಲ್ಲವಿ ಅವರ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆಯಂತಿದೆ. ಈ ಸಂಕಲನದ ಒಂಬತ್ತೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ.ಈ ಭಿನ್ನತೆಯು ಕೇವಲ ಕತೆಗಳ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವುದಕ್ಕಾಗಿ ಬಳಸಿದ ತಂತ್ರ ಮತ್ತು ಕಟ್ಟುವುದಕ್ಕಾಗಿ ಬಳಸಿದ ಭಾಷೆಯಲ್ಲಿಯೂ ವೈವಿಧ್ಯ ಕಂಡು ಬರುತ್ತದೆ. ಪ್ರತಿಯೊಂದು ಕತೆಯನ್ನೂ ಒಂದು 'ಪ್ರಯೋಗ' ಎಂಬಂತೆ ಭಾವಿಸಿ ಕಟ್ಟಿರುವುದು ವಿಶೇಷ, ಈ ಪ್ರಯೋಗಶೀಲತೆಯೇ ಕತೆಗಳು ವಿಶಿಷ್ಟವಾಗಿ ಕಾಣಿಸುವುದಕ್ಕೆ ಕಾರಣವಾಗಿದೆ. ಕತೆಯ ಅಗತ್ಯಕ್ಕೆ ಅನುಗುಣವಾಗಿ ಬಳಕೆಯಾಗುವ ಭಾಷೆ ಗಮನ ಸೆಳೆಯದೇ ಇರಲಾರದು ಅನುಭವದ ಲೋಕವನ್ನು ವಿಸ್ತರಿಸುವ ಈ ಕತೆಗಳು ಕನ್ನಡ ಕಥಾಲೋಕಕ್ಕೆ ಹೊಸ ಸೇರ್ಪಡೆ ಎನ್ನಲಡ್ಡಿಯಿಲ್ಲ.
ಮೇಲ್ನೋಟಕ್ಕೆ ತೆಳುವಾದ ಸಾಧಾರಣ ಎನ್ನಿಸುವ ಸಂಗತಿ ಘಟನೆಗಳನ್ನು ಲೇಖಕಿಯು ತನ್ನ ಬರವಣಿಗೆಯ ಮೂಲಕ ವಿಶಿಷ್ಟಗೊಳಿಸಿದ್ದಾರೆ. ಮೊದಲ ಎರಡು ಕತೆಗಳಾದ ಕುಂಡದ ಬೇರು' 'ತಿರುವು' ಕತೆಗಳು ಲಘುವಾದ ವಸ್ತುವನ್ನು ಒಳಗೊಂಡಿವೆ. ನಂತರದ ರದ್ದಿ ಮತ್ತು ಕಣಗಿಲೆ ಕತೆಗಳು ಅನುಭವದ ತೀವ್ರತೆಯನ್ನು ಪದಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿವೆ. 'ಎಜುಕೇಟೆಡ್ ಗರ್ಲ್ಸ್, 'ಬಿಲ್ ಮತ್ತು ಯುರೋಪ್ಲೋಮೆಟ್ರಿ,ಕತೆಗಳು ತನ್ನ ಗಂಭೀರ ವಸ್ತುವಿನ ಕಾರಣಕ್ಕಾಗಿ ಗಮನ ಸೆಳೆಯುತ್ತವೆ. 'ಹುಳಿತೇಗು' ಮತ್ತು ಮಾಯದ ಗಾಯ ಕತೆಗಳಲ್ಲಿನ ಒಳತೋಟಿ, ಅಸಹಾಯಕತೆಗಳು ಮೆಚ್ಚುಗೆಗೆ ಪಾತ್ರವಾಗದೇ ಇರವು. ಈ ಕತೆಗಳ ಓದು ಸದ್ಯದ ಕನ್ನಡ ಕತೆಯ ಸ್ವರೂಪ ವಿವರಿಸುವ ಹಾಗೆ ಅನ್ನಿಸಿದರೆ ಅಚ್ಚರಿಯಿಲ್ಲ ಅಲ್ಲಲ್ಲಿ ಕವಿತೆಯ ಸಾಲುಗಳಂತೆ ಬರುವ ಗದ್ಯವು ಕತೆಗಳ ಓದನ್ನು ಪ್ರಿಯವಾಗಿಸುತ್ತದೆ ಪಲ್ಲವಿಯವರ ರಚನೆಗಳಿಗೆ ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಮನ್ನಣೆ ದೊರೆಯಲಿ ಎಂಬ ಸದಾಶಯ ನನ್ನದು.
-ದೇವು ಪತ್ತಾರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.