Your cart is empty now.
ತನ್ನೂರಿನ ಬದುಕು ಮತ್ತದರ ಮೂರು ತಲೆಮಾರುಗಳಲ್ಲಾದ ಸ್ಥಿತ್ಯಂತರಗಳನ್ನು ಜಗದಗಲಕ್ಕೆ ಪರಿಚಯಿಸಬೇಕೆಂಬ ಉತ್ಕಟ ಬಯಕೆಯ ಫಲ - ಈ ಕಾದಂಬರಿ.
ಒಂದು ಸಾಂಪ್ರದಾಯಿಕ ಕಾದಂಬರಿಯ ಯಾವತ್ತೂ ವ್ಯಾಕರಣಗಳ ಗೊಡವೆಗೆ ಹೋಗದೆ, ತನ್ನ ಕರುಳು ಬಳ್ಳಿಯ ಸಂಬಂಧಗಳಿಗೆ ಭಾವನಾತ್ಮಕ ತೆರೆಪೊಂದನ್ನು ಒದಗಿಸುವ ಕೆಲಸವನ್ನು ಕಾದಂಬರಿಕಾರ ಎಂ. ಜಿ. ಹೆಗಡೆಯವರು ಇಲ್ಲಿ ಸಮರ್ಥವಾಗಿಯೇ ಮಾಡಿದ್ದಾರೆ. ಮೂಲತಃ ಕರಾವಳಿಯ ಉತ್ತರ ಭಾಗದವರಾದ (ಉತ್ತರ ಕನ್ನಡ ಜಿಲ್ಲೆ) ಅವರು ಈಗ ಮತ್ತು ಸುದೀರ್ಘಕಾಲದಿಂದ ಕರಾವಳಿಯ ದಕ್ಷಿಣದ (ದಕ್ಷಿಣ ಕನ್ನಡ ಜಿಲ್ಲೆ) ಭಾಗವೇ ಆಗಿರುವುದರಿಂದ, ತನ್ನ ಮೂಲದ ಕುರಿತು ಅವರಿಗೊಂದು ವಿಶಿಷ್ಟವಾದ ಒಳಗಿನದರ ಹೊರನೋಟ ಸಿಕ್ಕಿದೆ; ಅದೂ ಕೂಡ ಮಾಹಿತಿಯುತವಾದ ಹೊರನೋಟ. ಇದು ಈ ಕಾದಂಬರಿಯನ್ನು ವಿಶಿಷ್ಟಗೊಳಿಸುತ್ತದೆ.
ಮೂರು ತಲೆಮಾರುಗಳ ಸ್ಥಿತ್ಯಂತರವನ್ನು ವಸ್ತುವಾಗಿರಿಸಿಕೊಂಡ, ಹಲವು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಆದರೆ ಇಲ್ಲಿ, ಕಾದಂಬರಿಕಾರರು ತನ್ನ ಊರು-ಸಮಾಜವನ್ನು ಒಂದು ಮ್ಯಾಕ್ರೋ ನೆಲೆಗಟ್ಟಿನಿಂದ ನೋಡಲು ಪ್ರಯತ್ನಿಸಿರುವುದು, ನನ್ನ ಸೀಮಿತ ಓದಿನ ಮಿತಿಯಲ್ಲಿ ನನಗೆ ಗಮನಾರ್ಹ ಅನ್ನಿಸಿತು.
ಇಲ್ಲಿನ ಬಹುತೇಕ ಪಾತ್ರಗಳು ಸ್ಕೂಲವಾಗಿ ಕರ್ನಾಟಕದ ಕರಾವಳಿಯ ಯಾವುದೇ ಊರಿನ ಪಾತ್ರಗಳಾಗಿರಬಹುದು. ಭಾಷೆ-ಬದುಕು ಬೇರೆ ಇದ್ದರೂ, ಸಮಾಜ ಮತ್ತದರ ಸ್ಥಿತ್ಯಂತರಗಳು ಏಕರೂಪಿ ಮತ್ತು ಈ ಸ್ಥಿತ್ಯಂತರಗಳಿಗೆ ಅಸಂಖ್ಯ ಪರಕೀಯ ಕಾರಣಗಳು, ಪ್ರಭಾವಗಳು ಇರುತ್ತವೆ, ಮ್ಯಾಕ್ರೋ ಮಟ್ಟದಲ್ಲಿ ಅವೂ ಬಹುತೇಕ ಏಕರೂಪಿ ಆಗಿರುವುದು ಇದಕ್ಕೆ ಕಾರಣ ಇರಬಹುದು.
ಕಾದಂಬರಿಕಾರರು ತಾವು ಪ್ರತಿನಿಧಿಸುವ ಸಾಮಾಜಿಕ ವರ್ಗದ ಒಳಹೊರಗುಗಳನ್ನು ಇಲ್ಲಿ ಯಾವುದೇ ಭಿಡೆ ಇಲ್ಲದೆ, ಚರ್ಚಿಸುತ್ತಾರೆ. ಭೂಮಾಲಕ ವರ್ಗದ ಹೊರಗಿನ ಪಾತ್ರಗಳೆಲ್ಲ ಇಲ್ಲಿ ಬಹುತೇಕ ಪರಿಧಿಯಲ್ಲಿಯೇ ಕಥೆಗೆ ಪೂರಕವಾಗಿ ನಿಲ್ಲುತ್ತವೆ ಹೊರತು ಸ್ವತಃ ಕಥೆ ಆಗುವುದಿಲ್ಲ ಎಂಬುದು ಕೂಡ ಇಲ್ಲಿ ಗಮನಾರ್ಹ. ಆ ಮಟ್ಟಿಗೆ ಇಲ್ಲಿ ಪ್ರಾಮಾಣಿಕತೆ ಇದೆ. ಕಾದಂಬರಿಕಾರರು ಸ್ವತಃ ಸುದೀರ್ಘ ಕಾಲ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ತೊಡಗಿಕೊಂಡಿದ್ದು, ತನ್ನ ಬದುಕಿನ ಉತ್ತರಾರ್ಧದ ಬಳಿಕ ಕಾದಂಬರಿಕಾರರಾಗುತ್ತಿರುವುದರಿಂದ, ಅವರಿಗೆ ಅಯಾಚಿತವಾಗಿ ಒದಗಿರುವ ಸಾಮಾಜಿಕ ಸ್ಪಷ್ಟತೆಗಳು, ಕೆಲವೊಮ್ಮೆ ಕಾದಂಬರಿಯ ಒಘಕ್ಕೆ ಪೂರಕವಾಗಿ ನಿಲ್ಲುವುದನ್ನು ಕಾದಂಬರಿಯ ಉದ್ದಕ್ಕೂ ಗಮನಿಸಬಹುದು. ಹಾಗಾಗಿ, ವಿಶಾಲವಾದ ಕ್ಯಾನ್ವಾಸ್ ಹೊರತಾಗಿಯೂ ಕಾದಂಬರಿಕಾರರಿಗೆ ತಾನು ಹೇಳಬೇಕಿರುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗಿದೆ.
- ರಾಜಾರಾಂ ತಲ್ಲೂರು
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.