Your cart is empty now.
ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಚರ್ಚೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪರಿಕಲ್ಪನೆಗಳಲ್ಲಿ ಬಹುತ್ವವೂ ಒಂದು . ದೇಶದಲ್ಲಿ ಕಾವಳದಂತೆ ದಟ್ಟವಾಗಿ ಹಬ್ಬಿರುವ ವಿದ್ವೇಷದ ರಾಜಕೀಯ ವಾತಾವರಣಕ್ಕೂ, ಈ ಪರಿಕಲ್ಪನೆಯ ಚರ್ಚೆಗೂ ನಂಟಿದೆ. ಬರಗಾಲದಲ್ಲಿ ಮಳೆಯನ್ನು ಆವಾಹಿಸುವಂತೆ, ಚಾರಿತ್ರಿಕವಾದ ಒತ್ತಡಗಳಲ್ಲಿ ಪರಿಕಲ್ಪನೆಗಳು ಮೈದಳೆಯುತ್ತವೆ. ಬಿಕ್ಕಟ್ಟುಗಳ ಕಾಲದಲ್ಲಿ ನೆಮ್ಮದಿಯ ನಾಡನ್ನು ಕಟ್ಟಲು ಜರೂರಾದ ಪರಿಕಲ್ಪನೆಗಳನ್ನು ತಾತ್ವಿಕವಾಗಿ ರೂಪಿಸುವುದು ತಾತ್ವಿಕ ಹೊಣೆಗಾರಿಕೆ ಆ ಪರಿಕಲ್ಪನೆಗಳನ್ನು ನಾಡಿನ ಸಂಕಟ ಸಂತಸ ಕನಸು ಚಿಂತನೆ ಸಂಭ್ರಮಗಳನ್ನು ಒಳಗೊಳ್ಳುವಂತೆ ಮಾಡುವುದು ಸಾಂಸ್ಕೃತಿಕ ತಿಳುವಳಿಕೆ ರೂಪಿಸುವ ಕೆಲಸ. ಇದು ಒಬ್ಬರಿಂದಾಗುವುದಲ್ಲ. ಸಾಮೂಹಿಕ ತೊಡಗುವಿಕೆ. ಒಮ್ಮೆಗೆ ಮುಗಿಯುವುದಲ್ಲ. ಚರ್ಚೆ ಸಂವಾದಗಳ ಮೂಲಕ ನಿರಂತರ ಮಾಡುತ್ತಲೇ ಇರಬೇಕಾದ್ದು.
ಹಲವು ಕಸುಬು ಭಾಷೆ ಧರ್ಮ ದರ್ಶನ ಸಂಸ್ಕೃತಿ ಪ್ರಾಂತ್ಯಗಳು ಇರುವ ಭಾರತಕ್ಕೆ ಬಹುತ್ವವು ಜೀವದುಸಿರು. ಈ ಉಸಿರು ಕ್ಷೀಣಗೊಂಡರೆ ದೇಶ ಕುಸಿದುಹೋಗುವುದು. ಹೀಗಾಗಿಯೇ ಬಹುತ್ವವನ್ನು ಸಂವಿಧಾನದಲ್ಲಿರುವ ಸಮಾನತೆ ಸ್ವಾತಂತ್ರ್ಯ ಸೋದರತೆಗಳನ್ನು ಧಾರಣ ಮಾಡಬಲ್ಲ ಆದರ್ಶಮೌಲ್ಯವನ್ನಾಗಿ ನಿರ್ವಚಿಸಬೇಕಿದೆ. ಕೂಡುಬಾಳಿನ ಮೌಲ್ಯಕಲ್ಪನೆಯನ್ನು ಸಮುದಾಯಗಳ ಸಾಮಾನ್ಯ ತಿಳುವಳಿಕೆಯನ್ನಾಗಿ ನಿತ್ಯಬದುಕಿನಲ್ಲಿ ಮಿಸುಕುವ ಸಂವೇದನೆಯನ್ನಾಗಿ ನೆಲೆಗೊಳಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರಂಪರೆಯಲ್ಲಿರುವ ಕೆಲವು ಎಳೆಗಳನ್ನು ಹುಡುಕಿ ಹೆಣೆದು ಬಹುತ್ವದ ಬಟ್ಟೆಯನ್ನು ನೇಯಲಾಗಿದೆ. ಇದಕ್ಕಾಗಿ ನಾಡಿನ ಭೂಗೋಳ ಸಮಾಜ ಕಸುಬು ರಾಜಕಾರಣ ಧರ್ಮ ದರ್ಶನ ನಾಟಕ ಸಂಗೀತ ಭಾಷೆ ಸಾಹಿತ್ಯ ಶಾಸನ ಚಿತ್ರಪಟ ಚಳುವಳಿ ಹಾಗೂ ಸಂಸ್ಥೆಗಳನ್ನು ಆಧಾರವನ್ನಾಗಿ ಇಟ್ಟುಕೊಂಡಿದೆ. ಇವುಗಳ ವಿಶ್ಲೇಷಣೆ ವ್ಯಾಖ್ಯಾನಗಳ ಮೂಲಕ, ಕರ್ನಾಟಕ ನಡೆಸಿದ ಬಹುತ್ವದ ಅಪೂರ್ವ ಪ್ರಯೋಗಗಳನ್ನು ಕಾಣಿಸಲು ಯತ್ನಿಸಲಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.