ಶ್ರೀಯುತ ಪವನ್ ಮೌರ್ಯ ಚಕ್ರವರ್ತಿಯವರು ಬರೆದಿರುವ ಆನೆಗಳನ್ನು ಕುರಿತ "ಆರಂಕುಶವಿಟ್ಟೊಡಂ...
ಎಂಬ 16 ಲೇಖನಗಳ ಪುಸ್ತಕದಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ವ್ಯಾಪ್ತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದಾರೆ. ಇದುವರೆವಿಗೆ ಆನೆಗಳ ಬಗ್ಗೆ ಬಂದಿರುವ ಅನೇಕ ಕೃತಿಗಳನ್ನು ಓದಿ, ಕ್ಷೇತ್ರಕಾರ್ಯ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಇದರೊಂದಿಗೆ ಸಂದರ್ಶನಗಳ ಮೂಲಕ ಪಡೆದ ಮಾಹಿತಿಯನ್ನು ಬಳಸಿ ಹೆಚ್ಚಿನ ವಿವರಗಳನ್ನು ಆನೆಗಳ ಬಗ್ಗೆ ಹಾಗೂ ಆನೆ ಪಳಗಿಸುವವರ ಬಗ್ಗೆ ಬರೆದಿದ್ದಾರೆ... ಪವನ್ ಮೌರ್ಯ ಅವರು ಈ ಕೃತಿ ರಚನೆಗಾಗಿ ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಬಂದಿರುವ ಹಲವಾರು ಕೃತಿಗಳನ್ನು ಪರಾಮರ್ಶಿಸಿ ಅತ್ಯಮೂಲ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ಬಳಸಿಕೊಂಡಿದ್ದಾರೆ. ಇವುಗಳಲ್ಲಿ ದೇಶೀಯವಾಗಿ ಆನೆಗಳನ್ನು ಸಾಕುತ್ತಿದ್ದ ವಿಧಾನ, ಅವುಗಳಿಗೆ ಕಾಯಿಲೆಯಾದಾಗ ನೀಡುತ್ತಿದ್ದ ಚಿಕಿತ್ಸಾ ಪದ್ಧತಿಯನ್ನು ವಿವರವಾಗಿ ತಿಳಿಸಿದ್ದಾರೆ. ನಾರಾಯಣ ದೀಕ್ಷಿತ್ ಎಂಬುವರು ಬರೆದಿರುವ ಗಜಗ್ರಹಣ ಕೃತಿ, ಮಲೆಯಾಳಂ ಭಾಷೆಯ ಗಜ ರಕ್ಷತಂತ್ರ, ಪಾಲಕಾಪ್ಯಮುನಿ ವಿರಚಿತ ಗಜಶಾಸ್ತ್ರ ಮುಂತಾದ ಕೃತಿಗಳಿಂದ ಪಾರಂಪರಿಕವಾಗಿ ಆನೆಗಳು ವಾಸಿಸುವ ಸ್ಥಳ, ಬದುಕುವ ರೀತಿ, ಆನೆಗಳನ್ನು ಹಿಡಿಯುವ ಮತ್ತು ಪಳಗಿಸುವ ವಿಧಾನ ಮೊದಲಾದ ವಿವರಗಳನ್ನು ಈ ಕೃತಿಗಳಲ್ಲಿ ತಿಳಿಸಿದ್ದು, ಈ ಎಲ್ಲಾ ಮಾಹಿತಿಗಳನ್ನು ತಮ್ಮ ಕೃತಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಶಾಸನಗಳಲ್ಲಿ ಆನೆಗಳ ಬಗ್ಗೆ ಬಂದಿರುವ ವರ್ಣನೆ, ಯುದ್ಧಗಳಲ್ಲಿ ಅವುಗಳ ವರ್ತನೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ...
ಆನೆಗಳನ್ನು ಕುರಿತಂತೆ ಕೆಲವು ಡಾಕ್ಯುಮೆಂಟರಿಗಳು ಬಂದಿದ್ದು, ಅವುಗಳ ನಿಗೂಢ ಬದುಕನ್ನು ಜಗತ್ತಿಗೆ ತೆರೆದಿಟ್ಟಿವೆ. ಲೇಖಕರು ಬಹು ಸೂಕ್ಷ್ಮಜೀವಿ ಹಾಗೂ ಸ್ನೇಹಜೀವಿಯಾದ ಆನೆಗಳ ಬಗ್ಗೆ ಅನೇಕ ವಿವರಗಳನ್ನು ಒಂದೆಡೆ ತಂದು ಈ ಪುಸ್ತಕ ರೂಪದಲ್ಲಿ ನೀಡಿದ್ದಾರೆ. ಇದರೊಂದಿಗೆ ಆನೆಗಳೊಂದಿಗೆ ತಮ್ಮ ಜೀವನವನ್ನು ಕಳೆಯುತ್ತಿರುವ ಬಂಡಿಪುರ, ಮದುಮಲೆ, ನೀಲಗಿರಿ ಬೆಟ್ಟ ಪ್ರದೇಶ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟ ಮೊದಲಾದ ಕಡೆಗಳಲ್ಲಿ ವಾಸಿಸುವ ಜೇನು ಕುರುಬ, ಬೆಟ್ಟ ಕುರುಬ ಮೊದಲಾದ ಕಾಡಿನ ಮಕ್ಕಳು ಹಾಗೂ ಅವರ ಮತ್ತು ಆನೆಗಳ ನಡುವಿನ ಸಂಬಂಧಗಳ ಬಗ್ಗೆ ಅವರೊಡನೆ ಸಂದರ್ಶನ ಮಾಡಿ ವಿಷಯವನ್ನು ಸಂಗ್ರಹಿಸಿದ್ದಾರೆ. ಹೀಗೆ ಅಪರೂಪದ ವಿಷಯಗಳನ್ನು ತೆಗೆದುಕೊಂಡು ನಾನಾ ಆಯಾಮಗಳಲ್ಲಿ ಆನೆಗಳ ಬಗ್ಗೆ ವಿವರ ನೀಡಿ ಪುಸ್ತಕ ರಚಿಸಿರುವ ಪವನ್ ಮೌರ್ಯ ಚಕ್ರವರ್ತಿಯವರು ಅಭಿನಂದನಾರ್ಹರು.
- ದೇವರಕೊಂಡಾರೆಡ್ಡಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.