Your cart is empty now.
ಗಡಿ ದಾಟಿದ ಗುರು
ಎರಡು ಕಾರಣಗಳಿಗಾಗಿ ಬಹಳ ಬಹಳ ಮುಖ್ಯವಾದ ಕಾದಂಬರಿ ಇದು. ಮೊದಲನೆಯದು ಇಲ್ಲಿಯ ನಿರ್ಲಿಪ್ತತೆ,
ಎರಡನೆಯದು ಇಲ್ಲಿಯ ಸ್ವ-ವಿಮರ್ಶೆ, ಕನ್ನಡ ಸಾಹಿತ್ಯಲೋಕದ ಒಳ-ಹೊರಗೆ ಗಟ್ಟಿದನಿಯಲ್ಲಿ, ದಿಟ್ಟತನದಲ್ಲಿ ಆರಂಭಗೊಂಡ ದಲಿತ ಸಾಹಿತ್ಯ ಕೆಲವೇ ವರ್ಷಗಳಲ್ಲಿ ಆತ್ಮಕಥನಗಳ ದಾರಿಗೆ ಹೊರಳಿಕೊಂಡಾಗ ಸಕಲೆಂಟು ವೇದನೆಗಳ ಭಾವಪೂರ್ಣ ನಿವೇದನೆಯ ಜಾಡಿನಿಂದ ಇದು ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಮತ್ತು ಕುತೂಹಲ ಸಾಹಿತ್ಯದ ಓರ್ವ ವಿದ್ಯಾರ್ಥಿಯಾಗಿ ನನ್ನದಾಗಿತ್ತು. ಗುರುಪ್ರಸಾದ್ ಕಂಟಲಗೆರೆಯವರ : ಈ ಕಿರು ಕಾದಂಬರಿ ಉತ್ತರವಾಗಿಯೂ ಮತ್ತು ಕನ್ನಡ ದಲಿತ ಸಾಹಿತ್ಯದ ಬಗ್ಗೆ ಬಹಳ ದೊಡ್ಡ ಭರವಸೆಯಾಗಿಯೂ ಮೂಡಿ ಬಂದಿದೆ. ಸಮುದಾಯದ ಸಂಕೀರ್ಣ ಜೀವನಾನುಭವಗಳನ್ನು ಉಪಮೆ-ರೂಪಕಾದಿ ಯಾವ ಸಾಹಿತ್ಯ ಪರಿಕರಗಳಿಂದಲೂ ನೇವರಿಸದೆ ಬದುಕಿನ ತೀವ್ರತೆಯನ್ನು ಮುಟ್ಟಿಮುಟ್ಟಿ ಮಾತಾಡಿಸುವಂಥ ಕೃತಿ ಇದು, ಶಾಸ್ತ್ರಗಳ, ನಿಯಮ-ನಿಬಂಧನೆಗಳ, ಸಿದ್ಧಾಂತಗಳ ಚೌಕಟ್ಟುಗಳನ್ನು ಮೆತ್ತಗೆ ಹರಿದು, ತನ್ನನ್ನು ತಾನೇ ನೋಡುವಂತೆ ಒತ್ತಾಯಿಸುವ ಈ ಕೃತಿಯನ್ನು, ಗಾತ್ರದ ಕಾರಣಕ್ಕಷ್ಟೇ ಕಿರು ಕಾದಂಬರಿ ಎಂದು ಪರಿಭಾವಿಸಬೇಕೇ ಹೊರತು ಇದರ ಆಳ-ಅಳವು ಬೇರೆಯೇ ಇದೆ. ತಮ್ಮ ಈ ಕಾದಂಬರಿಯಲ್ಲಿ ಗುರು, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೆಲ್ಲವನ್ನೂ ಅತ್ಯಂತ ತೀಕ್ಷ್ಯವಾಗಿ ನೋಡುತ್ತಿದ್ದಾರೆ ಎಂಬುದೇ ಅತ್ಯಂತ ಪ್ರಮುಖವಾದ ಅಂಶ. ಈ ತೀಕ್ಷ್ಯತೆ, ಈ ನಿರ್ಲಿಪ್ತತೆ, ಈ ಸ್ವ-ವಿಮರ್ಶೆ ಕನ್ನಡದ ಕಾದಂಬರಿ ಲೋಕದಲ್ಲಿ ಮೊದಲು ದರ್ಶನವಾದದ್ದೇ ಶ್ರೀ ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನಲ್ಲಿ, ದಲಿತ ಲೋಕದ 'ಮದುಮಗಳ' ಹುಟ್ಟಿಗೆ ಕಾರಣವಾಗುವಂತಹ ಬೀಜದ ಗುಣವಷ್ಟೇ ಅಲ್ಲ, ಸ್ವತಃ ಬೀಜವೇ ಈ ಕಾದಂಬರಿಯಲ್ಲಿದೆ. ತನ್ನವರ ಬದುಕನ್ನು ದಿಟ್ಟಿಸಿ ಮತ್ತು ಧ್ಯಾನಿಸಿ ನೋಡುವ ಹರಿತ ಕಣ್ಣುಗಳಿರುವ ಗುರು ಈ ಕಾದಂಬರಿಯಲ್ಲಿ ಅನೇಕ ಬಗೆಯ ಗಡಿಗಳನ್ನು ಏಕಕಾಲಕ್ಕೆ ದಾಟಿದ್ದಾರೆ. ಆ ಗಡಿಗಳು ಯಾವುವು ಎಂಬುದನ್ನು ಓದುಗರು ಗುರುತಿಸಿದರೆ ಗುರು ಮಾಡಿರುವ ಈ ಅ-ಸಮ ಸಾಹಸ ಎಷ್ಟು ಉನ್ನತವಾದುದು ಎಂಬುದು ಮನವರಿಕೆಯಾದೀತು. ಆತ್ಮವೃತ್ತಾಂತವನ್ನು ನಿರಾಯಾಸವಾಗಿ ಕಥಿಸುವ ರುಚಿಕಟ್ಟಾದ ನಿರೂಪಣೆಗಿಂತ ಆತ್ಮವಿಮರ್ಶೆಯ ಕಡುಕಷ್ಟದ ದಾರಿಯನ್ನು ಬಯಸಿ ಬಯಸಿ ಆರಿಸಿಕೊಂಡಿರುವ ಗುರು ಈ ಕಾದಂಬರಿಯನ್ನು ಇನ್ನಷ್ಟು ವಿಸ್ತರಿಸಬೇಕೆಂಬುದು ನನ್ನ ಪ್ರೀತಿಯ ಆಗ್ರಹ.
ನಿತ್ಯಾನಂದ ಬಿ ಶೆಟ್ಟಿ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.