Your cart is empty now.
'ಜಾಗತೀಕರಣ' ಎನ್ನುವ ಸಂಗತಿಯನ್ನು ನಾವು ಇತ್ತೀಚಿನ ದಶಕಗಳಲ್ಲಿ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಾರ ವ್ಯವಹಾರಗಳಿಗೆ ಸೀಮಿತವಾಗಿ ಬಳಸುತ್ತೇವೆ. ಆದರೆ ದೇಶ-ದೇಶಗಳ ನಡುವೆ ವ್ಯಾಪಾರವು ಯಾವುದೋ ರೂಪದಲ್ಲಿ ಪ್ರಾರಂಭವಾದರೆ ಸಾಕು, 'ಜಾಗತೀಕರಣ'ವು ಸದ್ದಿಲ್ಲದೆ ನಡೆದಿರುತ್ತದೆ. ಈ ಪ್ರಕ್ರಿಯೆಯನ್ನು ಎಲ್ಲಾ ಕಾಲದಲ್ಲಿಯೂ ಜಗತ್ತು ಹಲವು ರೂಪಗಳಲ್ಲಿ ಕಂಡಿದೆ. ಸಿಹಿ-ಕಹಿಗಳೆರಡನ್ನೂ ಒಟ್ಟಿಗೆ ತಂದೊಡ್ಡುವ ಜಾಗತೀಕರಣವು ಆ ದೇಶ-ಕಾಲದ ಜನಸಾಮಾನ್ಯರ ಬದುಕಿನಲ್ಲಿ ಹಲವು ಗಡಿಗಳನ್ನು ದಾಟುವ ಸವಾಲನ್ನು ಜೀವನ್ಮರಣದ ಸಂಗತಿಯಾಗಿ ಮುಂದಿಡುತ್ತದೆ. ಬದುಕಿನಲ್ಲಿ ಬದಲಾವಣೆಯನ್ನು ಕಡ್ಡಾಯವಾಗಿ ಬೇಡುವ ಈ ವಿದ್ಯಮಾನವು, ತಲೆಮಾರುಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಿಸುತ್ತದೆ. ಧರ್ಮ, ಸಂಸ್ಕೃತಿ, ಭಾಷೆ, ವಾಣಿಜ್ಯ, ರಾಜಕೀಯ, ನೈತಿಕತೆ - ಎಲ್ಲದರಲ್ಲಿಯೂ ಊಹಿಸಲಾರದ ಸಂಕರವನ್ನು ಸೃಷ್ಟಿಸಿ ಯುಗಸಂಘರ್ಷವನ್ನು ಸೃಷ್ಟಿಸುತ್ತದೆ.
ಎರಡನೆಯ ಶತಮಾನದಲ್ಲಿ ಇಂತಹದೊಂದು ದೊಡ್ಡ ಜಾಗತೀಕರಣಕ್ಕೆ ಏಷ್ಯಾಖಂಡದ ಜನರು ಮುಖಾಮುಖಿಯಾದರು. ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ವಾಹನವನ್ನು ಬಳಸಿಯೂ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿಯು ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ, ಕಾಡು, ನಾಡುಗಳನ್ನು ಹಾದು ಹೋಗುತ್ತಿತ್ತು. ಈ ಕಾಲದ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜೈಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅದಕ್ಕಾಗಿಯೇ ಸೀಮಿತವಾಗಿ ಉಳಿಯಲಿಲ್ಲ. ಧರ್ಮಗಳು, ಭಾಷೆಗಳು, ಲಿಪಿಗಳು, ಕೌಶಲ್ಯಗಳು, ಕಲಾಪ್ರಕಾರಗಳು, ತಂತ್ರಜ್ಞಾನಗಳು - ಹೀಗೆ ಹಲವು ವಿದ್ಯಮಾನಗಳು ಈ ದಾರಿಯ ಮೂಲಕ ಅತ್ತಿತ್ತ ಚಲಿಸಿದವು. ಆ ಕಾಲದ ಜನರು ಅವೆಲ್ಲವನ್ನೂ ತಮ್ಮ ಆವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಸಫಲರಾದರು.
ಈ ಕಾದಂಬರಿಯು ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ನಿಮ್ಮ ಮುಂದಿಡಲು ಪ್ರಯತ್ನಿಸುತ್ತದೆ. ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.