Your cart is empty now.
ಪೊನ್ನಾಚಿ ಬೀಟ್ಸ್
ಸ್ವಾಮಿ ಪೊನ್ನಾಚಿಯವರು ತಮ್ಮ ಕವಿತೆಗಳ ಪುಸ್ತಕದ ಮೂಲಕ ನನಗೆ ಪರಿಚಯವಾದವರು. ಆ ಸಂದರ್ಭದಲ್ಲಿ ನಾನು ಅವರಿಗೆ ಒಂದು ಪತ್ರ ಕೂಡ ಬರೆದಿದ್ದೆ. ಅವರ ಕವಿತೆಗಳ ವಿವರಗಳಾಗಲೀ ಮತ್ತು ನನ್ನ ಪತ್ರದ ವಿವರಗಳಾಗಲೀ ಈಗ ನನಗೆ ನೆನಪಿಲ್ಲ. ನಿಮ್ಮ ಕವಿತೆಗಳಲ್ಲಿ ಹುಸಿ ಅಧ್ಯಾತ್ಮ, ಹುಸಿ ಅನುಭಾವ ಇಲ್ಲದಿರುವುದು ಸಂತೋಷದ ಸಂಗತಿ ಎಂದು ಬರೆದಿದ್ದು ಮಾತ್ರ ನೆನಪಿದೆ. ಈಗಲೂ ಈ ಮಾತು ನನಗೆ ಮುಖ್ಯ ಎನಿಸಿದೆ. ಆ ನಂತರ ಈ ನಡುವೆ ಸುವರ್ಣಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ. ಕೋವಿಡ್ ಬಂದು ಅಲ್ಲಾಡಿಸಿ ಹೋಗಿದೆ. ಇವರ ‘ಧೂಪದ ಮಕ್ಕಳು’ ಕಥಾ ಸಂಕಲನ ಪ್ರಕಟಣೆಗೂ ಮುನ್ನವೇ ಛಂದ ಪುಸ್ತಕದ ಬಹುಮಾನ ಗಳಿಸಿ ಸಾಹಿತ್ಯ ವಲಯದಲ್ಲಿ ಹೆಸರು ಸಂಪಾದಿಸಿದ್ದಾರೆ.
ಈ ಸಂಕಲನದ ಕತೆಗಳು ಸೂಕ್ಷ್ಮವೂ ಸಂವೇದನಾಶೀಲವೂ ಅನನ್ಯವೂ ವಿಶಿಷ್ಟವೂ ಆಗಿವೆ. ಈ ಕತೆಗಳು ಅವರು ಈ ಹಿಂದೆ ಕವಿತೆ ಬರೆಯುತ್ತಿದ್ದರು ಎಂಬುದನ್ನೇ ಮರೆಸಿವೆ (ನಮ್ಮ ಕಾವ್ಯ ಮೀಮಾಂಸೆಯಲ್ಲಿ ಗದ್ಯ-ಪದ್ಯ ಎಂಬ ಭೇದವೇ ಇಲ್ಲ. ಎಲ್ಲವೂ ಕಾವ್ಯವೇ. ಆದರೆ ದೃಶ್ಯ ಮತ್ತು ಶ್ರಾವ್ಯ ಎಂಬ ಭೇದವಿದೆ.). ಇದೀಗ ಅವರ ಶೀರ್ಷಿಕೆಯ ಕತೆ `ಧೂಪದ ಮಕ್ಕಳು’ ಕತೆ ಚಲನಚಿತ್ರವಾಗಿದೆ.
ಹಾಡು-ಪಾಡು
ಈಗ ಕತೆಗಾರ ೧೭ ಲೇಖನಗಳ ಒಂದು ಕಟ್ಟನ್ನು ನನ್ನ ಮುಂದಿರಿಸಿ, ನಾಲ್ಕು ಮಾತು ಬರೆದು ಕೊಡಿ ಎಂದು ಕೇಳಿದ್ದಾರೆ. ಇವರ ಈ ಬರಹಗಳಿಗೆ ನಾಲ್ಕು ಮಾತು ಬರೆಯುವುದು ನನಗೆ ಸಂತೋಷದ ವಿಷಯ. ಒಂದೆರಡು ಲೇಖನಗಳನ್ನು ಹೊರತುಪಡಿಸಿದರೆ ಬಹುತೇಕ ಲೇಖನಗಳು ಮೈಸೂರಿನಿಂದ ಪ್ರಕಟವಾಗುವ ದೈನಿಕ `ಆಂದೋಲನ’z ಸಾಹಿತ್ಯ ಪುರವಣಿಗಳಲ್ಲಿ ಪ್ರಕಟವಾದವುಗಳು. `ಆಂದೋಲನ’ ತನ್ನ ಸಾಪ್ತಾಹಿಕ ಪುರವಣಿ ಆರಂಭಿಸಿದಾಗ ಅದಕ್ಕೆ ಹಾಡು ಪಾಡು ಎಂಬ ಹೆಸರು ನೀಡಿದವರು ಲಕ್ಷ್ಮೀಪತಿ ಕೋಲಾರ! ಕನ್ನಡದ ಪ್ರಸಿದ್ಧ ಕವಿ ಬೇಂದ್ರೆಯವರು `ಹಾಡು ಪಾಡು’ ಎಂಬ ಪದಪುಂಜವನ್ನು ಬಳಸಿದ್ದಾರೆ. ತಮ್ಮ ಒಂದು ಕವಿತಾ ಸಂಕಲನದ ಆರಂಭದಲ್ಲಿ `ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕಾ! ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸುಖವ ಹಣಿಸು ನನಗೆ’ ಎಂಬ ಅರ್ಥದ ಸಾಲು ಬರೆದಿದ್ದಾರೆ. ಲಕ್ಷ್ಮೀಪತಿ ಕೋಲಾರ ಅವರು ನಾಮಕರಣ ಮಾಡುವಾಗ ಈ ಹಿನ್ನೆಲೆಯಲ್ಲಿ ಮಾಡದೆಯೂ ಇರಬಹುದು.
ಕನ್ನಡದ ಪ್ರಸಿದ್ಧ ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿಯವರನ್ನು ಕಾಡಿನ ಹುಡುಗ ಎಂದು ಕರೆದಿದ್ದಾರೆ. ಅವರು `ಕಾಡು’ ಎಂಬ ಕಾದಂಬರಿ ಬರೆದ ಕಾರಣದಿಂದ ಅವರನ್ನು ಹಾಗೆ ಕರೆಯಲಾಗಿದೆ. ಆದರೆ ಸ್ವಾಮಿ ಪೊನ್ನಾಚಿ ಮಹದೇಶ್ವರ ಬೆಟ್ಟ ಸಾಲಿನ ಪೊನ್ನಾಚಿ, ಚೆಂಗಡಿ ಪ್ರದೇಶದವರಾದ ಕಾರಣ ಮತ್ತು ಅದನ್ನು ಅವುಗಳನ್ನು ಮನಸ್ಸಿಗೆ, ಹೃದಯ ಮಿದುಳಿಗೆ ಸಂಯಮದಿAದ ಆವಾಹಿಸಿಕೊಂಡ ಕಾರಣ ‘ಕಾಡು ಹುಡುಗ’ ಎಂಬುದು ಇವರಿಗೆ ಅನ್ವರ್ಥ.
ಬಾಕಿ ಇತಿಹಾಸ
ಈ ಸಂಕಲನದ ಬರಹಗಳು ಸಣ್ಣಕತೆ, ಲಲಿತ ಪ್ರಬಂಧಗಳ ಸೃಜನಶೀಲತೆ, ಸ್ವಾರಸ್ಯ, ರಂಜಕತೆ, ಪತ್ರಿಕಾ ಬರಹಗಳ ಖಚಿತತೆ, ಸಂಕ್ಷಿಪ್ತತೆ, ಸಂಶೋಧಕನ ಅಧ್ಯಯನಶೀಲತೆ ಸಾಮಾಜಿಕ ಕಳಕಳಿ ಈ ಎಲ್ಲವನ್ನೂ ಒಳಗೊಂಡಿದೆ. ಇಲ್ಲಿಯ ಬರಹಗಳು ರಂಜನೀಯತೆಯ ಆಚೆಗೂ ತಮ್ಮ ಕೈ ಚಾಚುತ್ತವೆ.
ಈ ಸಂಕಲನದ ಬಹುತೇಕ ಬರಹಗಳು ನಮ್ಮ ನಾಡಿನ ವಿಶಿಷ್ಟ ಕಾಲಘಟ್ಟದವು. ದಂತಚೋರ ನರಹಂತಕ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದ್ದು. ಆ ಬಗ್ಗೆ ವಿವರಗಳು ಪತ್ರಿಕೆಗಳ ಹಳೆ ಸಂಚಿಕೆಗಳಲ್ಲಿ, ಪೊಲೀಸ್ ದಾಖಲೆಗಳಲ್ಲಿ ಸಿಕ್ಕಾವು. ಆದರೆ ಸ್ವಾಮಿ ಪೊನ್ನಾಚಿಯವರ ಬರಹಗಳಲ್ಲಿ ಈ ಪ್ರಕರಣಗಳ ಮತ್ತೊಂದು ಮಾನವೀಯ ಮುಖ ಬಿಚ್ಚಿಡುತ್ತಾರೆ. ಈ ಸಂಕಲನದಲ್ಲಿ ಹುತಾತ್ಮರಾದ ಶಕೀಲ್ ಅಹಮದ್ ಅವರ ಬಗ್ಗೆ ಬರಹ ಇದೆ. ಶಕೀಲ್ ಅಹಮದ್ ಅವರ ಕೆಲಸ ಸಾಧನೆ ತ್ಯಾಗ ಎಲ್ಲ ದಾಖಲೆಗಳಲ್ಲಿ ಸಿಕ್ಕೀತು. ಆದರೆ, ಸ್ವಾಮಿ ಪೊನ್ನಾಚಿ ಶಕೀಲ್ ಅಹಮದ್ ಅವರ ವ್ಯಕ್ತಿಚಿತ್ರ ಬಿಡಿಸಿರುವ ಪರಿಯೇ ಬೇರೆ. ಒಬ್ಬ ಕತೆಗಾರ ಮಾತ್ರ ಹೀಗೆ ಬಿಡಿಸಬಲ್ಲ. ಆದರೆ ವಾಚಾಮಗೋಚರ ಹೊಗಳದ ಅಥವಾ ಅನಗತ್ಯ ತೆಗಳದ, ಕಣ್ಣೀರು ಸುರಿಸದ ಸಂಯಮ ಇವರಿಗಿದೆ.
ಇದು ಬಾಕಿ ಇತಿಹಾಸ!
ವೀರಪ್ಪನ್ ಕಡೆಯವರನ್ನು, ವೀರಪ್ಪನನ್ನು ಮತ್ತು ಕಾರ್ಯಾಚರಣೆಯ ಪಡೆಯವರನ್ನು ಇಟಿಛಿouಟಿಣeಡಿ ಆದ ಅನೇಕ ವಿವರಗಳು ಚಿತ್ರವತ್ತಾಗಿದೆ (ಈಗ ಇಟಿಛಿouಟಿಣeಡಿ ಎಂಬ ಪದಕ್ಕೆ ಕೊಲೆ ಎಂದೇ ಅರ್ಥ ಬಂದಿರುವುದು ದುರಂತ.).
ಈ ಎಲ್ಲ ಬರಹಗಳನ್ನು ಒಟ್ಟಿಗೆ ಓದಿದಾಗ ಮಲೆ ಮಹದೇಶ್ವರ ಬೆಟ್ಟ ಸಾಲಿನ ಆಗಿನ ಪರಿಸ್ಥಿತಿ ಸನ್ನಿವೇಶ ಕಣ್ಣ ಮುಂದೆ ಬರುತ್ತದೆ. ಕಾಲಾಂತರದಲ್ಲಿ ಈ ಲೇಖನಗಳು ಹೆಚ್ಚಿನ ಮಹತ್ವ ಪಡೆಯುತ್ತವೆ.
ಕಾಫಿಯ ಕಂಪು
ಬಿಳಿಗಿರಿಯ ಒಂದು ತುದಿಯಲ್ಲಿನ ಕಾಫಿ ಎಸ್ಟೇಟ್ ಇವರ ಗಮನ ಸೆಳೆದಿದೆ. ಇವರು ತಮ್ಮ ವೃತ್ತಿಯ ತಿರುಗಾಟದ ಸಂದರ್ಭದಲ್ಲಿ ಬಿಳಿಗಿರಿ ಕಾಫಿ ಎಸ್ಟೇಟ್ ಮತ್ತು ಸೋಲಿಗರ ಸಂಪರ್ಕಕ್ಕೆ ಬರುತ್ತಾರೆ. ಕಾಫಿ ಎಸ್ಟೇಟ್ ಮಾಡಿದ ಮಾರೀಸ್‌ನ ಸಾಹಸಗಾಥೆ ಇದೆ. ಅವನ ಮಗ ಕಿರಿಯ ಮಾರೀಸ್‌ನ ಜೀವನ ಗಾಥೆ ಮತ್ತು ಆತನ ದುರಂತದ ಚಿತ್ರ ಇದೆ. ಆತನ ಮಗಳೋ ಮೊಮ್ಮಗಳೋ ಆದ ಬರಹಗಾರ್ತಿ ಮೋನಿಕಾ ಮಾರೀಸ್ ಅವರ ಸಂಪರ್ಕ ಸಾಧಿಸುತ್ತಾರೆ. ಕಾಫಿ ತೋಟಗಳ ಕಾರಣದಿಂದ ಈ ಭಾಗದ ಅನೇಕ ಸೋಲಿಗರು ಕಾಫಿ ಬೆಳೆಗಾರರಾಗಿ ಜೀವನ ಕಂಡುಕೊAಡ ವಿವರದ ಬಗ್ಗೆ ಬೆಳಕು ಹಾಯಿಸುತ್ತಾರೆ. ಸರಕಾರಗಳು ಸೋಲಿಗರ ಬದುಕು ಉತ್ತಮಪಡಿಸಲು ಮಾಡಿದ ಕೆಲಸಗಳಿಗಿಂತ ಇದು ಹೆಚ್ಚಿನ ಮಹತ್ವದ್ದು ಎಂದು ಹೇಳುತ್ತಾರೆ
ಪೊನ್ನಾಚಿ ಚೆಂಗಡಿ ಮತ್ತು ಈ ಸುತ್ತಮುತ್ತಲ ಪ್ರದೇಶಕ್ಕೆ ತಮ್ಮ ಯೌವ್ವನದ ದಿವಸಗಳಲ್ಲಿ ಕನಸು ಹೊತ್ತು ಬಂದ ಸಾಕೇತ್ ರಾಜನ್ ಅವರ ವಿವರ ಇದೆ. ಇವರ ಜತೆಗೇ ಅನುಮಾನ ಹುಡುಗಾಟಿಕೆಯಿಂದಲೇ ಬಂದ ಆಕಾಶ ಲೇಖಕ ಅಬ್ದುಲ್ ರಶೀದರ ಒಂದು ಚಿತ್ರವೂ ಇದೆ. ಇವು ಎಪ್ಪತ್ತರ ದಶಕದಲ್ಲಿನ ಮಹಾರಾಜಾ ಕಾಲೇಜು, ಗಂಗೋತ್ರಿಯ ಸಮಾಜವಾದೀ, ಮಾರ್ಕ್ಸಿಸ್ಟ್ ಹೋರಾಟಗಳ ಜಲಕ್ ನೀಡುತ್ತವೆ.
ಸ್ಥಿತ್ಯಂತರಗಳು
ಇವುಗಳ ಜತೆಗೆ ನಮ್ಮ ಸೋಲಿಗರ ಬದುಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆಗಳು ತಂದ ಸ್ಥಿತ್ಯಂತರಗಳು, ಅವರನ್ನು ಎಲ್ಲಿಯೂ ಸಲ್ಲದ ಮನುಷ್ಯರನ್ನಾಗಿಸಿದ ಬಗೆ ವಿವರಗಳು ಇವೆ. ಈ ಲೇಖನಗಳ ಸಂಕಲನ ಕನ್ನಡದ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ಲೇಖನಗಳ ಸಂಕಲನವಾಗುವುದರಲ್ಲಿ ಸಂಶಯ ಇಲ್ಲ. ಕನ್ನಡ ಸಹೃದಯ ಲೋಕ ಇದನ್ನು ಗುರುತಿಸಿ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ.
-ಕೆ. ವೆಂಕಟರಾಜು
ಚಾಮರಾಜನಗರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.