ಹಿಂದಿನ ಕಾಲದಲ್ಲಿ ನಡೆದದ್ದನ್ನು ಹೇಳುವುದಾಗಲೀ ಮುಂದೆ ನಡೆಯಬಹುದೆಂದು ಊಹಿಸುವುದಾಗಲೀ ನಾವು ಬದುಕಿರುವ ಈ ಕಾಲದ ಅಗತ್ಯ ಅನಿವಾರ್ಯತೆಗಳಿಗೆ ತಕ್ಕಂತೆಯೇ ರೂಪ ಪಡೆಯುತ್ತದೆ. ನಮ್ಮ ಕಾಲದ ಬದುಕನ್ನು ಕುರಿತು ಕನ್ನಡದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಬೆಳೆಯುತ್ತ, ಗಟ್ಟಿಗೊಳ್ಳುತ್ತ ಬಂದಿರುವ ಹೆಣ್ಣು ನೋಟ, ಹೆಣ್ಣು ಭಾಷೆಗಳ ಚಿಂತನೆಯ ಪರಿಣಾಮವಾಗಿ ಡಾ. ಜ್ಯೋತಿಯವರ ಕಥೆಗಳು ರಚನೆಗೊಂಡಿವೆ.
ಸೀತೆ, ಅಹಲ್ಯ, ದೌಪದಿ, ಇಂಥ ಪುರಾಣ ಪಾತ್ರಗಳ ವರ್ತನೆ ಇಂದು ಹೇಗೆ ಕಾಣುತ್ತದೆ, ಪ್ರಾಚೀನ ಕಥೆಗಳ ಸನ್ನಿವೇಶವು ಇಂದೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಹಾಗೇ ಮುಂದುವರೆಯುತ್ತಿರುವಾಗ ಈ ಕಾಲದ ಹೆಣ್ಣು ಯಾವ ನಿಲುವು ತೆಗೆದುಕೊಳ್ಳಬಹುದು ಅನ್ನುವ ಸೂಚನೆಯೂ ಈ ಕಥೆಗಳಲ್ಲಿದೆ. ಹಾಗೆ ನೋಡಿದಾಗ ಹಳೆಯದು ಹೊಸದಾಗುವ ಕಥೆಗಳಲ್ಲೂ ನಡೆದಿದೆ. ಕೊನೆಯಿರದ ಕೆಲಸ ಈ ಕಥೆಗಳಲ್ಲೂ ನಡೆದಿದೆ.
ಸದ್ಯದ ಸಾಮಾಜಿಕ ಸ್ಥಿತಿಯ ಬಗ್ಗೆ ತಮ್ಮ ಬರಹಗಳಲ್ಲಿ ಚಿಂತನೆ ನಡೆಸಿರುವ ಜ್ಯೋತಿಯವರು ಈ ಸಂಕಲನದ ಮೂಲಕ ಕತೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಭಾವದ ಲೋಕ, ವಿಚಾರ, ಪ್ರಶ್ನೆಗಳನ್ನು ಕಥೆಯಾಗಿಸಲು ಬಳಸುವ ಭಾಷೆಯ ಬಗ್ಗೆ ಇನ್ನಷ್ಟು ಗಮನ ನೀಡಿದರೆ, ತಮ್ಮ ಕಲ್ಪನೆಗೆ ಕಟ್ಟುಪಾಡುಗಳನ್ನು ವಿಧಿಸದೆ ಇದ್ದರೆ ಡಾ.ಜ್ಯೋತಿಯವರು ಕನ್ನಡದ ಉತ್ತಮ ಕಥೆಗಾರರಾಗುತ್ತಾರೆ ಅನಿಸುತ್ತದೆ.
- ಓ.ಎಲ್. ನಾಗಭೂಷಣ ಸ್ವಾಮಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.