Your cart is empty now.
ಲೇಖಕಿ ಅನುಸೂಯ ಯತೀಶ್ ಬಹಳ ಕಕ್ಕುಲತೆಯ ಹೆಣ್ಣು ಮಗಳು ಮತ್ತು ಬಹಳ ಜವಾಬ್ದಾರಿಯುತ ಶಿಕ್ಷಕಿ ಹಾಗೂ ಗೃಹಿಣಿ. ಅವರ ತಾಯಿಯಂತಹ ಅಂತಃಕರಣಕ್ಕೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ಅವರು ಕಲಿಸುತ್ತಿರುವ ಶಾಲೆಯ ಮಕ್ಕಳು ಇಬ್ಬರೂ ಸಮಾನ ಹಕ್ಕುದಾರರು. ಶಿಕ್ಷಕಿ ಯಾರು, ತಾಯಿ ಯಾರು ಎಂದು ಗೆರೆ ಎಳೆಯಲಾಗದಷ್ಟು ಮಮತೆಯ ಜೀವ ಅವರದು. ಅವರು ಕಲಿಸುವ ಶಾಲೆಯ ಮಕ್ಕಳ ಜೊತೆಗಿನ ಒಡನಾಟವನ್ನು ಒಮ್ಮೊಮ್ಮೆ ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು.
ಅದನ್ನು ಕೇಳಿದ ನನಗೆ ಈ ಟೀಚರೊಳಗಿನ ತಾಯಿ ಜೀವದ ಪರಿಚಯವಾಗಿತ್ತು. ಈ ಅನುಪಮವಾದ ಅನುಭವ ಶಾಲೆಯನ್ನು ಬರಿಯ ಮಾತಲ್ಲಿ ಮುಗಿಸಬೇಡಿ. ಸರಣಿಯ ರೂಪದಲ್ಲಿ ಬರೆಯಿರಿ ಎಂದು ಕುಮ್ಮಕ್ಕು ನೀಡಿದ್ದೆ. ಆಗ ನಮ್ಮ 'ಕೆಂಡಸಂಪಿಗೆ' ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನನಗೇ ಅಚ್ಚರಿಯಾಗುವಂತೆ ಬಹಳ ಮನೋಜ್ಞವಾಗಿ ಬರೆದೇ ಬಿಟ್ಟರು. ಇವರ ಈ ಬರಹ ನನಗೇನೂ ಆಶ್ಚರ್ಯ ಉಂಟು ಮಾಡಲಿಲ್ಲ. ಏಕೆಂದರೆ ಪಕ್ಕಾ ತಾಯಿ ಹೃದಯದ ಅನುಸೂಯರಂತಹ ಬರಹಗಾರ್ತಿಯೊಬ್ಬಳು ರೂಢಿಗತವಾದ ಸಿದ್ದಮಾದರಿಯ ಅಕಾಡೆಮಿಕ್ ನಷೆಗಳನ್ನು ಕಿತ್ತು ಬಿಸಾಕಿ ಅಂತಃಕರಣದ ಅನುಭವ ಜನ್ಯವಾದ ಗದ್ಯವನ್ನು ಬರೆದರೆ ಅದು ಹೃದಯ ಸ್ಪರ್ಶಿಯ ಅಮೂಲ್ಯವೂ ಆಗಬಲ್ಲದೆಂದು ನನಗೆ ಗೊತ್ತಿತ್ತು. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗಟ್ಟಲೆ ಸೊನ್ನೆಗಳನ್ನು ತುಂಬುವುದರಿಂದ ಹಿಡಿದು ಮಂಜುನಾಥ ಎಂಬ ಹೂ ಹೃದಯದ ಬಾಲಕನ ಕಥಾನಕದವರೆಗಿನ ವಿವರಗಳು ಈ ಅನುಸೂಯ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ. ಅನುಸೂಯ ಅವರಿಗೆ ಅಭಿನಂದನೆಗಳು
ಅಬ್ದುಲ್ ರಶೀದ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.