Your cart is empty now.
ಓಘತರಣಕ್ಕೆ ಧಮ್ಮಯಾನವನ್ನು ಓದಿ
'ಧಮ್ಮಯಾನ'ವು ನಾಲ್ಕು ವರ್ಷಗಳ ತಪಸ್ಸಿನ ದೆಸೆಯಿಂದಾಗಿ ಇಂದು ಒಂದು ಬೃಹತ್ ಗ್ರಂಥವಾಗಿ ಹೊರಬರುತ್ತಿದೆ. ಅದಕ್ಕಾಗಿ ಮಿತ್ರ ಮೂಡ್ನಾಕೂಡು ಚಿನ್ನಸ್ವಾಮಿಯವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ತಪಸ್ಸು ಎನ್ನುವ ಪದವನ್ನು ಕೇವಲ ಅಲಂಕಾರಿವಾಗಿ ಪ್ರಯೋಗಮಾಡಿಲ್ಲ. 'ಸಂವಾದ' ಸಂಚಿಕೆಯಲ್ಲಿ ಬರುತ್ತಿದ್ದ 'ಧಮ್ಮಯಾನ' ಧಾರಾವಾಹಿಯನ್ನು ನಿರಂತರವಾಗಿ ಓದಿಕೊಂಡು ಬಂದಿದ್ದೇನೆ. ಧಮ್ಮಯಾನವು ಅಷ್ಟೇನು ಸುಲಭದ ಯಾನ (ಪ್ರಯಾಣ)ವಲ್ಲ, ಧಮ್ಮವನ್ನು ಹೊತ್ತ ಯಾನವು (ದೋಣಿಯು )ಭದ್ರವಾಗಿದ್ದರೇನೆ ಓಘತರಣವು (ಪ್ರವಾಹ ದಾಟುವುದು) ಸಾಧ್ಯ (ಸಂಯುಕ್ತ ನಿಕಾಯದ ಸಗಾತಾ ವಗ್ಗದ ಓಘತರಣವನ್ನು ನೋಡಿ). ಧಮ್ಮಯಾನದ ಪ್ರಯಾಣವು ಸುಖಕರವಾಗಿರಬೇಕಾದರೆ ಮತ್ತು ಧಮ್ಮದೋಣಿಯು ಭದ್ರವಾಗಿರಬೇಕಾದರೆ ಕೃತಿಕಾರನು ತಪಸ್ಸು ಮಾಡಲೇಬೇಕು. ಕೃತಿಕಾರನು ಸಮರ್ಪಣಾಭಾವದಿಂದ ತಪಸ್ಸು ಮಾಡಿದ್ದರಿಂದಾಗಿ ದೋಣಿಯೂ ಭದ್ರವಾಗಿದೆ. ಪ್ರಯಾಣವೂ ಸುಖಕರವಾಗಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ.
ಚಿನ್ನಸ್ವಾಮಿಯವರು ವಿಪಸ್ಸನ ಧ್ಯಾನಿಗಳು. ಪಾಲಿ ಮೂಲಗ್ರಂಥಗಳನ್ನು (ಅವುಗಳ ಇಂಗ್ಲಿಷ್ ರೂಪದಲ್ಲಿ) ಓದಿಕೊಂಡವರು. ಯಾವ ಮಹನೀಯರು ಪಾಲಿ ಮೂಲದ ತ್ರಿಪಿಟಕಗಳನ್ನು ಓದಿ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೋ ಅಂತಹ ಪೂಜ್ಯರಾದ ಭಿಕ್ಕು ಬೋಧಿಯವರನ್ನು, ಪರಮಪೂಜ್ಯ ಆಚಾರ್ಯ ಬುದ್ಧರಕ್ಷಿತ ಥೇರಾ ಇನ್ನೂ ಮುಂತಾದವರೊಡನೆ ಬೆರೆತವರು. ಹೀಗಾಗಿ ಇವರು ತಿಲಕ್ಷಣ ಬಗ್ಗೆ ಬರೆಯುವಾಗಾಗಲಿ, ಆರ್ಯಸತ್ಯಗಳ ಬಗ್ಗೆ ಟಿಪ್ಪಣೆ ಮಾಡುವಾಗಾಗಲಿ ಅತ್ಯಂತ ಎಚ್ಚರದಿಂದ ಮೂಲಕ್ಕೆ ಲೋಪ ಬರದಂತೆ, ಕಠಿಣ ಸಂಗತಿಗಳನ್ನು ಸರಳ ಕನ್ನಡ ಪದಗಳಲ್ಲಿ ಮತ್ತು ಸುತ್ತಗಳನ್ನು ಆಧರಿಸಿಯೇ ಸಾಮಾನ್ಯ ಓದುಗನೂ ಪರಿಗ್ರಹಿಸುವ ರೀತಿಯಲ್ಲಿ ಮಂಡಿಸುತ್ತಾರೆ.
ಕನ್ನಡದಲ್ಲಿ ಬರೆಯುವ ಬೌದ್ಧ ಸಾಹಿತಿಗಳು ಬಹಳಷ್ಟು ಜನರಿದ್ದಾರೆ. ಉತ್ತಮೋತ್ತಮವಾಗಿ ಬರೆದವರೂ ಇದ್ದಾರೆ. ಅದಕ್ಕೆ ಕೊರತೆ ಏನಿಲ್ಲ. ಆದರೆ ಮೂಲ ಪಿಟಕಳಿಗೆ ಲಗ್ಗೆ ಹಾಕಿ ಅಲ್ಲಿಂದ ಹೆಕ್ಕಿ ಬರೆಯುವ ಪ್ರಥಮ ಶ್ರೇಣಿ ಪ್ರೈಮರಿ ರೈಟರ್ಸ್) ಬರಹಗಾರರು ಕಡಿಮೆಯೆ. ನಾನು ಕಂಡುಕೊಂಡಂತೆ ಮೂಡ್ಯಾಕೂಡು ಚಿನ್ನಸ್ವಾಮಿಯವರು ಪ್ರಥಮ ಶ್ರೇಣಿ ಬರಹಗಾರರಲ್ಲಿ ಒಬ್ಬರು. ನದಿಯಿಂದ ಮೊಗೆದ ನೀರಿಗೂ, ನಲ್ಲಿಯಿಂದ ಬಂದ ನೀರಿಗೂ ವ್ಯತ್ಯಾಸವಿರುತ್ತದೆ!
ಚಿನ್ನಸ್ವಾಮಿಯವರು ಧಮ್ಮವನ್ನು ರಸವತ್ತಾದ ಭಾಷೆಯಲ್ಲಿ ಕಥೆಯನ್ನು ಸರಾಗವಾಗಿ ಓದಿಕೊಂಡು ಹೋಗುವಂತೆ ತುಲನಾತ್ಮಕವಾಗಿ ಬರೆಯುತ್ತಾ ಹೋಗುತ್ತಾರೆ. ಪಾಲಿ ಪಾರಿಭಾಷಿಕ ಪದಗಳನ್ನು ಸುಲಭ ಕನ್ನಡಕ್ಕೆ ತಂದಿರುವುದು ವಿಶೇಷ ಸಂಗತಿ. ಪುರುಷಸೂಕ್ತದ ಮಂತ್ರಗಳನ್ನು ವಿಮರ್ಶಿಸುತ್ತಾ, ಛಾಂದೋಗೋಪನಿಷತ್ ವಾಕ್ಯಗಳನ್ನು ಉಧೃತಗೊಳಿಸುತ್ತಾ ತಮ್ಮ ಮಾತುಗಳಿಗೆ ಅರ್ಥವನ್ನು ತುಂಬುತ್ತಾರೆ. ಸಂದರ್ಭ ಬಂದಾಗ ಬುಧನ ಜಾತಕ ಕಥೆಗಳನ್ನೇ ಪ್ರಶ್ನಿಸುತ್ತಾರೆ. ಇದು ಒಬ್ಬ ಶ್ರೇಷ್ಠ ಚಿಂತಕನ ನಿರ್ಭೀತ ಉದಾನ (ಉದ್ಘಾರ)ವಾಗುತ್ತದೆ.
ಬುದ್ದರ ಬಗ್ಗೆ ಅರಿಯಬೇಕೆಂದರೆ, ಬೌದ್ಧಧರ್ಮವನ್ನು ಅಚ್ಚಗನ್ನಡದಲ್ಲಿ ತಿಳಿದುಕೊಳ್ಳಬೇಕೆಂದರೆ 'ಧಮ್ಮಯಾನ'ವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಇದೊಂದು ಶ್ರೇಷ್ಠ ಗ್ರಂಥ. ಈ 'ಧಮ್ಮಯಾನ'ವು ಎಲ್ಲರ ಬದುಕಿನ ಸುಂದರಯಾನವಾಗಲಿ ಎಂದು ಆಶಿಸುತ್ತೇನೆ.
- ಮೊಳಕಾಲ್ಕೂರು ಶ್ರೀನಿವಾಸಮೂರ್ತಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.