Your cart is empty now.
ಶ್ರೀಯುತ: ಕೆ ಎಲ್ ವಿ ಅವರ 'ತುಪಾಕಿಯ ಪಿಸು ಮಾತು' 47 ಭಾಗಗಳನ್ನು ಒಳಗೊಂಡ ಕಾದಂಬರಿ. ವರ್ತಮಾನದ ಸುಡುವ ಸಂಗತಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಹೊರ ಬಂದ ವಸ್ತು ವಿಚಾರದ ಕಾದಂಬರಿ ಇದಾಗಿದೆ. ಪರೋಕ್ಷವಾಗಿ ನಮ್ಮ ನಾಡಿನ ವರ್ತಮಾನದ ಕಥೆಯನ್ನು ಹೇಳಿದಂತಿದೆ. ಜಾತಿ, ಧರ್ಮ, ಮೌಡ್ಯ, ಅಸ್ಪೃಶ್ಯತೆ, ಬಡತನ, ದೇವರು, ಅಧಿಕಾರ, ಪ್ರಜ್ಞಾ ರಹಿತ ಸಮಾಜ ಇಂತಹದ್ದರ ನಡುವೆ ವೈಚಾರಿಕ ವ್ಯಕ್ತಿಯೇ ಅಪರಾಧಿಯಂತೆ ಕಾಣುವ, ಬಿಂಬಿಸುವ, ಹಾಗೂ ವೈಚಾರಿಕತೆಯ ಕಾರಣದಿಂದಾಗಿಯೇ ಪ್ರಗತಿಪರ ಚಿಂತನೆಯ ನಾಯಕಿ ಬಲಿಯಾಗುವ ಕಥನವಿದು. ಜ್ವಲಂತ ಎನಿಸುವ ಭಾವನಾತ್ಮಕ ಸಂಗತಿಗಳನ್ನು ಲೇಖಕರು ತುಂಬಾ ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಸ್ತ್ರೀ ಪ್ರಾಧಾನ್ಯತೆಯ ಈ ಕಾದಂಬರಿ ಮುಕ್ತ ಹಾಗೂ ಸಾಮಾಜಿಕ ಚಿಂತನೆಯ ಕೃತಿಯಾಗಿದ್ದು, ಉದ್ಯೋಷಿತ ಚಿತ್ತರದ ನಡೆಯಾಗಿ ಕಂಡರೂ, ಪರೋಕ್ಷವಾಗಿ ತನ್ನಂತರಂಗದ ಪ್ರಸಂಗ, ಘಟನೆಗಳ ವಿಸ್ತರಣೆಯಿಂದಾಗಿ ಸ್ತ್ರೀ ಪರ ಚಿಂತನೆಯ ಬೀಜಗಳನ್ನು ಬಿತ್ತರಿಸುತ್ತದೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಅಲ್ಲದೆ ಭವಿತವ್ಯ ಸಮಾಜದ ಮೂರನೆಯ ಕಣ್ಣಾಗಿ ಚಿತ್ರಿಸಿದ್ದು, ವರ್ತಮಾನದ ಸಮಾಜದ ಇರುವಿಕೆಯ ನೋಟವನ್ನು ಹಿಡಿದಿಟ್ಟಂತಿದೆ. ಪುರುಷ ನಿಷ್ಠ ಸಮಾಜಕ್ಕಿಂತ ಸ್ತ್ರೀ ನಿಷ್ಠ ಕುಟುಂಬಕ್ಕೆ ಒತ್ತು ನೀಡಿದ್ದು, ಮಹಿಳೆಯಿಂದ ಸಮಾಜದ ಪರಿವರ್ತನೆಯ ಸಾಧ್ಯ ಎಂದು ಬಲವಾಗಿ ನಂಬಿ, ಮನನ ಮಾಡಲು ಮುಂದಾಗುವ ವಿಧಾನವೇ ಈ ಕೃತಿಯ ಶಕ್ತಿಯಾಗಿದೆ.
ಇಲ್ಲಿಯ ವಸ್ತು ವಿಚಾರಗಳು ದಲಿತ ಜಗದೊಂದಿಗೆ ಮೂಡಿ ಬಂದರೂ, ಆ ಪರಿಧಿಯಿಂದ ಅಚೆಗೆ ನಿಂತು ನೋಡಲು ಹಚ್ಚುತ್ತದೆ. ರಕ್ಷಕ ವ್ಯವಸ್ಥೆಯ ಕೃತ್ರಿಮ ಬದುಕಿಗಿಂತ, ಸಹಜ ಮತ್ತು ಸುರಕ್ಷಿತ ಸಮಾಜವನ್ನು ಬಯಸುವ ಹಾಗೂ ಅದಕ್ಕಾಗಿ ಹಾತೊರೆವ ಧೈಯ ಇಲ್ಲಿಯದಾಗಿದ್ದು, ವರ್ತಮಾನದ ಚಿಂತಕರ ಇರುವಿಕೆಯನ್ನು ಪರೋಕ್ಷವಾಗಿ ಪ್ರಶ್ನಿಸುತ್ತಲೇ ತನ್ನತನವನ್ನು ಸಾಧಿಸುವ ಮಾರ್ಗಗಳ ಸಾಧ್ಯತೆಯ ಕುರಿತು ಮಾತನಾಡುತ್ತದೆ. ಆದರ್ಶಗಳಿಲ್ಲದ ಸಮಾಜ ಅವನತಿಯತ್ತ ಮುಖ ಮಾಡುತ್ತದೆ ಎಂದು ಸಾವಿನ ಸಮರ್ಪಣೆಯ ಮೂಲಕ ಬಿಂಬಿಸುತ್ತದೆ ಹಾಗೂ ಅಂತರಿಕ ಎಚ್ಚರಿಕೆಯನ್ನು ಪ್ರತಿಪಾದಿಸುತ್ತದೆ.
ಶ್ರೀಯುತ ಕೆ ಎಲ್ ವಿ ಅವರು ಈ ಕಾದಂಬರಿಯನ್ನು ಸಂಪೂರ್ಣವಾಗಿ ಆಡುಭಾಷೆಯಲ್ಲಿಯೇ ನಿರೂಪಿಸಿದ್ದು, ಓದುಗರಿಗೆ ತೊಡಕಾಗದಂತೆ ಎಚ್ಚರಿಕೆಯನ್ನು ವಹಿಸಿದ್ದಾರೆ. ಹಾಗೆಯೇ ಕುತೂಹಲ ಆಸಕ್ತಿಗಳೊಂದಿಗೆ ಓದಿಸಿಕೊಂಡು ಹೋಗುವಂತೆ ರೂಪ ಕೊಟ್ಟಿದ್ದಾರೆ. ಕಥನದಲ್ಲಿ ಸಂಕೀರ್ಣತೆ ಬೇಕಿತ್ತೆನಿಸಿದರೂ, ನಿರೂಪಣೆ ಸಂವಿಧಾನದ ವಿಸ್ತರಣೆಯಲ್ಲಿ ಪಳಗಿದಂತೆ ಕಾಣುತ್ತಾರೆ. ಅವರ ಚಿಂತನೆಗಳು ಸಮಾಜದ ಮಾತಾಗಲಿ ಎಂದು ಬಯಸುವೆ.
ಡಾ. ಅರವಿಂದ ಮಾಲಗತ್ತಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.