Your cart is empty now.
ಅಪರೂಪದ ಕಥೆಗಾರ ಸದಾಶಿವ ಸೊರಟೂರು ಅವರದು ಒಂದು ವಿಸ್ಮಯದ ಕಥಾಲೋಕ, 'ಜೀವವಿಲ್ಲದ ಒಂದು ತುಣುಕು ಕಾಗದ ಆಧಾರ್ ನನ್ನ ಇರುವನ್ನು ಸಾಬೀತು ಪಡಿಸಬೇಕೇ?' ಎಂದು ಟ್ರ್ಯಾಕ್ಟರ್ ಪರಸಪ್ಪ ಪ್ರಭುತ್ವಕ್ಕೆ ಎಸೆದ ಅಸಹಾಯಕ -ಸವಾಲೊಂದು ನೇಗಿಲು ಹಿಡಿದು ಹಸ್ತದ ಗೆರೆ ಅಳಿಸಿಹೋದ ಎಲ್ಲ ಬಡರೈತರ ಒಡಲ ಬೆಂಕಿಯಂತಿದೆ.
ಕೆಲವು ಕಥೆಗಳಲ್ಲಿ ದಾಂಪತ್ಯವನ್ನು ಮೀರಿದ ಮಧುರ ಸಂಬಂಧಗಳು ಸಹಜ ನಡಿಗೆಯ ಹಂತದಲ್ಲೇ ಬೆಳೆಯುತ್ತ ವಿವಾಹವೆಂಬ ಸಂಸ್ಥೆಯನ್ನು ಪ್ರಶ್ನಿಸತೊಡಗುತ್ತವೆ. ವ್ಯಕ್ತಿ-ವ್ಯಕ್ತಿಗಳ ನಡುವಿನ ಭಾವನಾತ್ಮಕ ಸಂಬಂಧದ ಜೊತೆ ಅದನ್ನು ಮೀರಿದ ಅಪೂರ್ವ ಸ್ನೇಹ ಭಾವ 'ಮುರಿದ ಮರದ ಚಿಗುರು' ಕಥೆಯ ತಿರುಳನ್ನು ಬಗೆದುಕೊಡುತ್ತದೆ. ಮನಸ್ಸಿನ ಹೊಯ್ದಾಟಕ್ಕೆ ಸೋತು ವಂಚನೆಗೊಳಗಾದರೂ ಆತ್ಮವಂಚನೆ ಮಾಡಿಕೊಳ್ಳದೇ ಬದುಕುವ ಅಮ್ಮ 'ಬೆಡಗಿನ ಕೀಲು ಮುರಿದು' ಕಥೆಯಲ್ಲಿ ಕಾಣಸಿಗುತ್ತಾಳೆ. ಮನೆ, ಮಡದಿ ಮತ್ತು ಮಗುವಿನ ನೆನಪು ತೊರೆದರೆ ಬದುಕನ್ನೇ ತೊರೆದಂತೆ ಎನ್ನುವ ಅನನ್ಯ ಮನಸ್ಸಿನ ಜೀವವೊಂದು 'ತೊರೆದು ಜೀವಿಸಬಹುದೆ?' ಕತೆಯಲ್ಲಿದೆ. ಹೆಣ್ಣು ಹಾಗೂ ಕೆಂಪು ಬಣ್ಣವನ್ನು ಅವ್ಯಾಹತವಾಗಿ ಜೋಡಿಸುವ ತಂತುವೊಂದನ್ನು 'ಹಗಲೆಂದರೆ ಬೆಳಕಲ್ಲ' ಕಥೆ ಶೋಧಿಸುತ್ತದೆ.
ಇಲ್ಲಿಯ ಮನುಷ್ಯ ಸಂಬಂಧಗಳು ಕತ್ತಲಿನಿಂದ ಬೆಳಕಿನ ಕಡೆಗೆ ಒಯ್ಯುವ ಅವ್ಯಕ್ತ ರೂಪಕವನ್ನು ಹಿಡಿದಿಟ್ಟುಕೊಂಡೇ ಮೂಡಿನಿಂತಿವೆ. ಉಪಮೆಗಳಲ್ಲಿ ಜನ್ನಿಸುವ ಕಥೆಯ ಎಳೆಗಳು ಅರ್ಥವಿಸ್ತಾರಕ್ಕೆ ತೆರೆದುಕೊಳ್ಳುವುದಲ್ಲದೇ ನಿರೂಪಣೆಯ ತಂತ್ರದಿಂದಲೇ ಆತ್ಯಂತಿಕವಾಗಿ ಗಮನಸೆಳೆಯುತ್ತವೆ. ಕಾವ್ಯಮಯವಾದ ಸೊರಟೂರರ ಭಾಷೆ ಓದಿನ ತನ್ಮಯತೆಯನ್ನು ಹೆಚ್ಚಿಸುವಂತಿದೆ.
ಸುನಂದಾ ಕಡಮೆ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.