Your cart is empty now.
ಬಂಜಗೆರೆ ಜಯಪ್ರಕಾಶ್ ತಮ್ಮ ಜೀವನ ದೃಷ್ಟಿ, ಬಂಡಾಯ ನೋಟ ಹಾಗೂ ತಾತ್ವಿಕತೆಗಳಿಗೆ ಹತ್ತಿರವಾಗಿರುವ ಈ ಕಾದಂಬರಿಯನ್ನು ಇಂಗ್ಲಿಷಿನಿಂದ ಅನುವಾದಿಸಿ, ಮೊದಲು 'ದೇಗುಲದಲ್ಲಿ ದೆವ್ವ' ಎಂದು ಹೆಸರಿಟ್ಟರು. ತನ್ನ ಕಾದಂಬರಿಗೆ ಹೆಸರಿಡುವಾಗ ಶಿಲುಬೆಯೇರಿದ ಏಸುವಿನ ಚಿರಪರಿಚಿತ ಚಿತ್ರದ ಅರ್ಥವನ್ನು ನೆನಪಿಸುತ್ತಾ, ಗೂಗಿ ಅದಕ್ಕೆ ತದ್ವಿರುದ್ಧವಾದ ವ್ಯಂಗ್ಯದ ಅರ್ಥ ಬರುವ 'ಡೆವಿಲ್ ಆನ್ ದ ಕ್ರಾಸ್' ಎಂಬ ಹೆಸರಿಟ್ಟಿದ್ದ. ಗೂಗಿಯ ಈ ಸೂಚನೆಗಳನ್ನು ಕನ್ನಡ ಹೆಸರು ಸಮರ್ಥವಾಗಿ ಬಿಂಬಿಸದೇ ಹೋದದ್ದರಿಂದ ಬಂಜಗೆರೆ ಮತ್ತೆ ಮೂಲ ಹೆಸರನ್ನೇ ಉಳಿಸಿಕೊಂಡರು. ಬಂಜಗೆರೆ ಹತ್ತಿರದಿಂದ ಕಂಡ ಭಾರತದ ಸಾಮುದಾಯಿಕ ಹೋರಾಟಗಳ ಲೋಕ ಆಫ್ರಿಕನ್ ಕಾದಂಬರಿಯಲ್ಲಿರುವ ಹೋರಾಟದ ಲೋಕದ ಜೊತೆಗೆ ಬೆರೆತು ಈ ಕನ್ನಡ ಕಾದಂಬರಿ ಈ ನೆಲದ ಅನುಭವಕ್ಕೆ ಹತ್ತಿರವಾದ ಕೃತಿಯಾಗಿದೆ. ಮೂಲ ಲೇಖಕನ ತಾತ್ವಿಕತೆಯೂ ಅನುವಾದಕನ ತಾತ್ವಿಕತೆಯೂ ಬೆರೆತಾಗ, ಬೆಸೆದಾಗ ಹುಟ್ಟುವ ಭಾಷಾಂತರದ ಒಳ್ಳೆಯ ಉದಾಹರಣೆಯಾಗಿ ಕೂಡ ಈ ಕಾದಂಬರಿ ನಮ್ಮ ಮುಂದಿದೆ. ಅದು ಇಂಡಿಯಾದಲ್ಲಿರುವ ವರಿಂಗಾಳಂಥ ನಾಯಕಿಯರ ಕತೆಯನ್ನೂ ಹೇಳುತ್ತದೆ. ಅನೇಕ ಆಫ್ರಿಕನ್ ಕಾದಂಬರಿಗಳ ಹೆಸರು, ಹಿನ್ನೆಲೆ ಬದಲಿಸಿದರೆ ಅವು ಕನ್ನಡದ ಕಾದಂಬರಿಗಳೇ ಆಗಬಲ್ಲವು ಎಂಬುದನ್ನು ನಾನು ಆಫ್ರಿಕನ್ ಕೃತಿಗಳನ್ನು ಓದುವಾಗ ಕಂಡುಕೊಂಡಿರುವೆ. ಈ ಕಾದಂಬರಿ ಕೂಡ ಆ ಸಾಲಿಗೇ ಸೇರುತ್ತದೆ. ಗೂಗಿ ವಾ ಥಿಯಾಂಗೋರ ಬದುಕು-ಬರಹಗಳು ಚಿಂತನೆಗಳು ಇವತ್ತಿಗೂ ಬರವಣಿಗೆಗಳಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು. ಗೆಳೆಯ ಬಂಜಗೆರೆ ಜಯಪ್ರಕಾಶ್ ಮಾಡಿರುವ ಗೂಗಿಯ ಕನ್ನಡೀಕರಣ ಆಫ್ರಿಕನ್ ಸಾಹಿತ್ಯದ ಜೊತೆಗಿನ ಕನ್ನಡದ ನಂಟನ್ನು ಇನ್ನಷ್ಟು ಗಾಢವಾಗಿಸುವ ಹಾದಿಗಳನ್ನು ತೆರೆಯಬಲ್ಲದು.
ನಟರಾಜ್ ಹುಳಿಯಾರ್
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.