ಸಂಗೀತದಲ್ಲಿ ಹೆಚ್ಚೆಚ್ಚು ಸಾಧಿಸುತ್ತಾ ಹೋಗಬೇಕು
ಅನ್ನೋ ಬಯಕೆ ಯಾವಾಗಲೂ ಇರುತ್ತೆ. ನನ್ನ
ತಲೆಯಲ್ಲಿ ಬಂದು ಹೋಗುವ ಎಲ್ಲಾ
ಆಲೋಚನೆಗಳು ಕೈಯಲ್ಲಿ ಬರೋದಕ್ಕೆ ಸಾಧ್ಯ
ಆಗಬೇಕು. ನನ್ನ ಮನಸ್ಸಿನ ಕಲ್ಪನೆಗಳು ಬೆರಳಿಗೆ
ಬಂದು, ಬೆರಳುಗಳೇ ನನ್ನ ಕಲ್ಪನೆಗಳಾಗಿಬಿಡಬೇಕು.
ಆದರೆ ಆಶ್ಚರ್ಯ ಅಂದರೆ ನೀವು ಹೆಚ್ಚೆಚ್ಚು
ಸಾಧಿಸಿದಷ್ಟು ನಿಮ್ಮ ಕಲ್ಪನೆಗಳು ಹೆಚ್ಚೆಚ್ಚು
ಗರಿಗೆದರಿಕೊಂಡು ಬೆಳೆಯುತ್ತಾ ಹೋಗುತ್ತವೆ!
ಏಕೆಂದರೆ ನಮ್ಮ ಕಲ್ಪನೆಗಳು ಯಾವಾಗಲೂ
ನಮಗಿರುವ ನುಡಿಸುವ ಅಥವಾ ಹಾಡುವ
ಸಾಮರ್ಥ್ಯಕ್ಕೆ ಸೀಮಿತಗೊಂಡಿರುತ್ತವೆ.
ಇದಕ್ಕಾಗಿಯೇ ನಾವು ಅಭ್ಯಾಸ ಮಾಡುವುದು,
ಸಾಧನೆ ಮಾಡುವುದು. ನೀವು ಹೆಚ್ಚೆಚ್ಚು ಕಲಿತು,
ಸಾಧನೆ ಮಾಡಿದಂತೆಲ್ಲಾ ನಿಮ್ಮ ಬೆರಳುಗಳು
ಹೆಚ್ಚೆಚ್ಚು ಕೌಶಲವನ್ನು, ಸಾಮರ್ಥ್ಯವನ್ನು
ಪಡೆದುಕೊಳ್ಳುತ್ತದೆ. ಬೆರಳುಗಳ ಸಾಧ್ಯತೆಗಳೂ
ಹೆಚ್ಚುತ್ತಾ ಹೋಗುತ್ತವೆ. ನಮ್ಮ ಸಾಮರ್ಥ್ಯ
ಹೆಚ್ಚಾದಂತೆ, ನಮ್ಮ ಕಲ್ಪನೆಗಳು ಬೆಳೆಯುತ್ತವೆ.
ನೀವು ಔತ್ತಮ್ಯದ ಕಡೆಗೆ ಹೋದಷ್ಟೂ ನಿಮಗೆ
ಹೆಚ್ಚೆಚ್ಚು ಕಾಣಿಸಲು ಪ್ರಾರಂಭವಾಗುತ್ತದೆ. ನೀವು
ಹೆಚ್ಚು ಮೇಲೆ ಹೋದಷ್ಟೂ ನಿಮಗೆ ಹೆಚ್ಚು
ಕಾಣುತ್ತದೆ. ಒಂದು ಇನ್ನೊಂದನ್ನು ಹೆಚ್ಚಿಸುತ್ತಾ
ಹೋಗುತ್ತದೆ. ನೀವು ಮೇಲೆ ಹೋದಷ್ಟೂ ನಿಮಗೆ
ಇನ್ನಷ್ಟನ್ನು ಕಾಣುವ ತವಕ ಉಂಟಾಗುತ್ತದೆ.
ಇದಕ್ಕೆ ಕೊನೆಯೇ ಇಲ್ಲ. ಈ ಕ್ರಿಯೆಯೇ ತುಂಬು
ತೃಪ್ತಿಯನ್ನು, ಒಂದು ಪೂರ್ಣತೆಯ ಭಾವವನ್ನು
ತಂದುಕೊಡುವಂತಹುದು. ಹಾಗಾಗಿ ನಾವೆಲ್ಲಾ
ಹಾತೊರೆಯುವುದು ಈ ಚಿತ್ತಮ್ಯಕ್ಕಾಗಿಯೇ, ನಮ್ಮ
ಇಡೀ ಪಯಣವೇ ಈ ಚಿತ್ತಮ್ಯದೆಡೆಗೆ.