ಜಾತ್ಯತೀತ-ಸ್ತ್ರೀವಾದಿ ಮೌಲ್ಯಗಳ ಪ್ರತಿಪುರಾಣ
ಲಕ್ಷ್ಮಿ, ಶ್ರೀಯಾ ಎಂಬ ತನ್ನ ಅಸ್ಪೃಶ್ಯ ಭಕ್ತೆಯ ಮನೆ ಹೊಕ್ಕಿದ್ದರಿಂದ ಜಗನ್ನಾಥ ತನ್ನಣ್ಣ ಬಲರಾಮನ ಸಲಹೆಯ ಮೇರೆಗೆ ಲಕ್ಷ್ಮಿಯನ್ನು ದೇವಳಕ್ಕೆ ಸೇರಿಸದೆ, ಅವಳ ಶಾಪಕ್ಕೆ ತುತ್ತಾಗಿ, ಅನ್ನ ನೀರು ದೊರೆಯದೆ ಇಬ್ಬರೂ ಪರಿತಪಿಸಿ, ಕೊನೆಗೆ ಪಶ್ಚಾತ್ತಾಪದೊಂದಿಗೆ ಲಕ್ಷ್ಮಿಯನ್ನು ಸ್ವೀಕರಿಸುವುದು 'ಲಕ್ಷ್ಮಿ ಪುರಾಣ'ದ ಒಟ್ಟು ಸಾರಾಂಶ.
ಶೈವದ ಅರವತ್ತಮೂರು ಪುರಾತನರ ಪುರಾಣಗಳನ್ನು ಬಲ್ಲ ದಕ್ಷಿಣದವರಾದ ನಮಗೆ ಇದು ಹೊಸ ವಿಚಾರವೇನೂ ಅಲ್ಲ. ಆದರೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಯವರಿಗೇ ಅನ್ಯಮತದವರೆಂಬ ಕಾರಣಕ್ಕಾಗಿ ಪ್ರವೇಶ ನಿರಾಕರಿಸಿದ ಪುರಿ ಜಗನ್ನಾಥ ಮಂದಿರದ ವೈಷ್ಣವ ಧಾರೆಯಲ್ಲಿ ಇಂತಹ ಪುರಾಣ ಹುಟ್ಟಿರುವುದು ಸೋಜಿಗ ಮತ್ತು ಅನನ್ಯ ಸಂಗತಿಯಾಗಿದೆ!
ಪಶ್ಚಿಮ ಬಂಗಾಳದಿಂದ ಹಿಡಿದು ತೆಲಂಗಾಣದ ಗಡಿಯವರೆಗಿನ ಪೂರ್ವ ಉದ್ಧಕ್ಕೂ ಅಚ್ಚರಿಯೆಂಬಂತೆ, ಕರಾವಳಿಯುದ್ದಕ್ಕೂ ಜನಪ್ರಿಯ ವ್ರತವಾಗಿ ರೂಪುಗೊಂಡಿರುವ ಪುರಾಣ'ದ ಮೂಲಕರ್ತೃ 15ನೇ ಶತಮಾನದ ಒಡಿಶಾದ ಕವಿ ಬಲರಾಮ ದಾಸ್.
ಲಿಂಗ ತಾರತಮ್ಯದ ಪುರುಷಪ್ರಧಾನ ವ್ಯವಸ್ಥೆಗೆ ಸೆಡ್ಡು ಹೊಡೆಯುವುದರೊಂದಿಗೆ ಅಸ್ಪೃಶ್ಯ ಜಾತಿ ಪದ್ಧತಿಯೊಂದಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿಯೇ ಇಕ್ಕಿ ಮೆಟ್ಟಿ ನಿಲ್ಲುವುದರಿಂದ ಈ ಕೃತಿ ಪ್ರತಿಪುರಾಣವಾಗಿ ಗಮನ ಸೆಳೆಯುವಂತಿದೆ.
ಸಾಂಪ್ರದಾಯಿಕತೆಯಲ್ಲೇ ಕ್ರಾಂತಿಯ ಕಿಡಿ ಹಚ್ಚಿದೆ. ಆದರೆ, ಮೂಲದಲ್ಲಿ ಈ ಪುರಾಣದ ಮಾನವೀಯ ಮೌಲ್ಯ ಬುಡಕಟ್ಟು ವ್ಯವಸ್ಥೆಯ ಮೌಲ್ಯಗಳೇ ಆಗಿದ್ದಿರಬಹುದೆಂಬುದನ್ನು ಗಮನಿಸಬಹುದಾಗಿದೆ. ಲಕ್ಷ್ಮಿಯ ಹುಟ್ಟಿಗೆ ಕಾರಣವಾದ ಕ್ಷೀರ ಮಂಥನ ಪುರಾಣವು ಮೂಲತಃ ಕೋಲಾ - ಮುಂಡಾಗಳದ್ದು. ಹಾಗೆಯೇ ಪುರಿ ಜಗನ್ನಾಥನು ವಿಷ್ಣುವಲ್ಲ; ನೀಲ ಮಾಧವ ಎಂಬ ಸವರ ಬುಡಕಟ್ಟಿನ ಅಧಿದೈವ ಅಥವಾ ಅವರ ಪೂರ್ವಿಕ ಪಿತೃ (ವಿವರಗಳಿಗೆ ತೆಗಳಿಗೆ ದಾರು ಪ್ರತಿಮಾ ನ ಪೂಜಿವೇ ಎಂಬ ಕೃತಿ ನೋಡಿ). ಕೋಲಾಗಳ ಕ್ಷೀರ ಮಂಥನದ ಪುರಾಣದೊಂದಿಗೆ, ಸವರರ ಜಗನ್ನಾಥನ ಪೂಜಾ ಪರಿಕಲ್ಪನೆಯು. ಪೂಜನಧರ್ಮಕ್ಕೆ ಹೊರತಾದ ಯಜನ ಸಂಸ್ಕೃತಿಯ ವೈದಿಕ ಸಂಸ್ಕೃತಿಗೆ ದೂಡಲ್ಪಟ್ಟಾಗ, ಬುಡಕಟ್ಟು ಮೌಲ್ಯಗಳು ನಿರಾಕರಣೆಗೊಂಡು, ವೈದಿಕ ಜಾಯಮಾನಕ್ಕೆ ಬಲವಂತವಾಗಿ ಒಗ್ಗಿಸಲ್ಪಟ್ಟಿತು! ಈ ಅನ್ಯಾಕ್ರಮಣಶೀಲ ಸಾಂಸ್ಕೃತಿಕ ಸಮೀಕರಣದ ಗಾಯದ ತಲ್ಲಣ ಮತ್ತು ಕಂಪನಗಳು 15ನೇ ಶತಮಾನದ ಕವಿ ಬಲರಾಮ ದಾಸ್ ಅವರಿಗೂ ತಾಕಿದ್ದಿದೆ. ಇರಲಿ, ವ್ರತವನ್ನಾಚರಿಸುವರಾದರೂ ಜಾತ್ಯತೀತರಾಗಿ ಬದಲಾಗಿರಬಹುದೇ? ಹಾಗಾಗಲಿಲ್ಲ. ಅಂದರೆ, ದೈವಪ್ರಜ್ಞೆಗಿಂತಲೂ ಕೆಡುಕಿನ ನಂಬಿಕೆಗಳನ್ನು ಹೆಚ್ಚು ಬೇರೂರಿಸುವಂತಹ ಸ್ಥಾವರ ಧಾರ್ಮಿಕ ವಿನ್ಯಾಸ ಈ ವೈದಿಕ ಸಂಸ್ಕೃತಿಯದ್ದು! ಕನ್ನಡಿಗರೆಲ್ಲರೂ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಓದಲೇಬೇಕಾದ ಕೃತಿ 'ಲಕ್ಷ್ಮಿ ಪುರಾಣ' ಹೊಸ ಸಾಂಸ್ಕೃತಿಕ ಚರ್ಚೆ ಮತ್ತು ಸಂಶೋಧನೆಗೆ ಅನುವು ಮಾಡಿಕೊಡಬಲ್ಲಂತಹ ಈ ಕೃತಿಯನ್ನು ಅನುವಾದಿಸಿ ಕನ್ನಡ ಓದುಗರಿಗೆ ನೀಡಿರುವ ಪ್ರೊ. ಬಿ. ಗಂಗಾಧರಮೂರ್ತಿಯವರು ಖಂಡಿತ ಅಭಿನಂದನಾರ್ಹರು.
-ಲಕ್ಷ್ಮೀಪತಿ ಕೋಲಾರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.