ಇಷ್ಟಕ್ಕೂ ದಶಕಗಳ ಹಿಂದಿನಿಂದ ಇಂದಿನವರೆಗೆ ಯಾರಾರೋ ನಡೆಸಿದ್ದ, ಎಲ್ಲೆಲ್ಲಿಯೋ ಚದುರಿ ಹೋಗಿದ್ದ ದೇವನೂರ ಮಹಾದೇವ ಅವರ ಸಂದರ್ಶನಗಳನ್ನೆಲ್ಲಾ ಕಷ್ಟಪಟ್ಟು ಕಲೆ ಹಾಕಿ, ಆಯ್ದು, ಈಗ ಸಂಗ್ರಹ ರೂಪದಲ್ಲಿ ತರಬೇಕಾದ ಅನಿವಾರ್ಯತೆಯಾದರೂ ನಮಗೆ ಏನಿತ್ತು?
ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸುತ್ತಾರೆಂಬುದಕ್ಕೆ ದೇಮರ ಪ್ರತಿಯೊಂದು ನಡೆ, ನುಡಿ, ಅಭಿವ್ಯಕ್ತಿ ಮಾದರಿ. ವ್ಯತಿರಿಕ್ತ ಸಂದರ್ಭದಲ್ಲಿಯೂ ಪ್ರವಾಹದ ವಿರುದ್ಧ ಈಜಲು ಹಿಂಜರಿಯದ ಅವರ ದೃಢತೆ ಮತ್ತು ಪ್ರಾಮಾಣಿಕತೆ, ಸಮುದಾಯದ ಒಳಿತಿಗಾಗಿ ಕಠಿಣ ನಿಲುವು ತೆಗೆದುಕೊಳ್ಳುವ ನಿಷ್ಠುರತೆ, ಸಿದ್ದ ಮಾದರಿಗಳನ್ನು ಒಡೆದು ಹೊಸದನ್ನು ಕಟ್ಟಬಲ್ಲ ಆಳವಾದ ತಿಳಿವಿನ ಸಾಂಸ್ಕೃತಿಕ ಮತ್ತು ರಾಜಕೀಯ ಸ್ಪಷ್ಟತೆ, ತರತಮವಿಲ್ಲದ ಸಾಮಾಜಿಕ ನ್ಯಾಯದ ಪ್ರಜ್ಞೆ, ವ್ಯವಸ್ಥೆಯೆಡೆಗೆ ಸಾತ್ವಿಕ ಸಿಟ್ಟು ಮತ್ತು ದಿಟ್ಟ ನೈತಿಕ ಪ್ರತಿರೋಧ, ಸಕಲ ಜೀವಗಳೆಡೆಗಿನ ಕಾರುಣ್ಯಭರಿತ ದಾರ್ಶನಿಕ ನೋಟ, ಕ್ಷಮಿಸುವ ಮನಸಿನ ಉದಾರತೆ ಹಾಗೂ ತನ್ನೊಳಗನ್ನು ಕೃತಿಮತೆಯಿಲ್ಲದೇ ಅವಲೋಕಿಸಿಕೊಳ್ಳುವ, ತಿದ್ದಿಕೊಳ್ಳುವ, ಕಾಲದ ತುರ್ತಿಗೆ ನವೀಕರಿಸಿಕೊಳ್ಳುವ ಕಡು ಎಚ್ಚರ- ಇವೆಲ್ಲವೂ ಸೇರಿ ಅವರನ್ನೊಬ್ಬ ಸ್ಥಾಪಿತ ಹಿತಾಸಕ್ತಿಯ ಶಾಶ್ವತ ವಿರೋಧಿಯನ್ನಾಗಿಸಿದೆ, ಮಾನವೀಯ ಸಂಸ್ಕೃತಿಯ ವಕ್ತಾರರನ್ನಾಗಿಸಿದೆ. ಸದಾ ಜನಹಿತ ಚಿಂತನೆಯ ಪ್ರತಿಪಾದಕನನ್ನಾಗಿಸಿದೆ.
ಹೀಗೆಂದೇ ದೇಮರ ಈ ಸಂದರ್ಶನಗಳ ಗುಚ್ಛ- ನಮ್ಮೊಳಗನ್ನು ಎಚ್ಚರಿಸುವ, ಸವಾಲುಗಳಿಗೆ ಬದ್ಧರಾಗಿಸುವ, ಸಮಾಜದ ಸಮಸ್ಯೆಗಳನ್ನೆದುರಿಸಲು ನೈತಿಕವಾಗಿ ಸಿದ್ದಗೊಳಿಸುವ... ತಿಳಿಬೆಳಕಿನ ನಂದಾದೀಪವಾಗಿದೆಯೆಂಬುದು ನಮ್ಮ ನಂಬುಗೆ.
- ಬನವಾಸಿಗರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.