{"product_id":"nanu-nimma-brahmanandam","title":"ನಾನು ನಿಮ್ಮ ಬ್ರಾಹ್ಮಾನಂದಂ | Nanu Nimma Brahmanandam (ಜೀವನಚರಿತ್ರೆ)","description":"\u003cdiv class=\"col-lg-12\"\u003e\n\u003cp\u003eಕೆಲವೊಮ್ಮೆ ಮನುಷ್ಯನ ಮುಖವೇ ಒಂದು ಜೀವಂತ ಭೂಪಟ. ಅಲ್ಲಿ ಸಾವಿರಾರು ಹಾದಿಗಳು, ಗಲ್ಲಿಗಳು, ನೂರಾರು ಕವಲುಗಳು ಮತ್ತು ನಗುವಿನ ತಿರುವುಗಳು. ತೆಲುಗು ಬೆಳ್ಳಿತೆರೆಯ ಮೇಲೆ ಬ್ರಹ್ಮಾನಂದಂ ಎಂಬ ಮಾಂತ್ರಿಕ ಪ್ರತ್ಯಕ್ಷನಾದರೆ ಸಾಕು, ನಮ್ಮೊಳಗೆ ಕಚಗುಳಿಯ ಸಾವಿರಾರು ರೂಪಗಳು ಅನಾವರಣಗೊಳ್ಳುತ್ತವೆ. ಬ್ರಹ್ಮಾನಂದಂ ಎಂದರೆ ಕೇವಲ ಅಬ್ಬರದ ನಗುವಲ್ಲ. ಅದು ನಮ್ಮ ಬೇಸರ, ವಿಷಾದ, ಮಬ್ಬಿನ ಮಧ್ಯೆ ಅರಳುವ ಒಂದು ಸಣ್ಣ ಆಶಾವಾದ. ಅವರ ಕಣ್ಣಿನ ಒಂದು ಮಿಟುಕು, ಹುಬ್ಬಿನ ಒಂದು ಏರಿಳಿತ ಅಥವಾ ತುಟಿಗಳ ಆ ವಿಚಿತ್ರ ವಕ್ರತೆ-ಇವೆಲ್ಲವೂ ಶಬ್ದಗಳಿಲ್ಲದ ಕವಿತೆಗಳಂತೆ. ಸೋಲಿನಲ್ಲೂ ಒಂದು ಸೊಬಗಿದೆ ಎಂದು ತೋರಿಸಿಕೊಟ್ಟ ಈ ಕಲಾವಿದ, ಸೋಲನ್ನೇ ಅತಿ ದೊಡ್ಡ ಹಾಸ್ಯವನ್ನಾಗಿ ಪರಿವರ್ತಿಸಿ ಗೆದ್ದವರು. ಈ ಪುಸ್ತಕವು ಕೇವಲ ಒಬ್ಬ ನಟನ ಬದುಕಿನ ದಾಖಲೆಯಲ್ಲ. ಇದು ಅನಾಮಿಕ ಮೌನವೊಂದು ಅಭಿನಯದ ಮೂಲಕ ಹೇಗೆ ಅಸಂಖ್ಯಾತ ಜನರ ಕ್ಷಣಗಳನ್ನು ಬೆಳಗಬಲ್ಲದು ಎಂಬುದರ ಕಥನ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಮುಖವನ್ನೇ ರಂಗಭೂಮಿಯಾಗಿಸಿಕೊಂಡು ಜಗತ್ತನ್ನು ಗೆದ್ದ ಪರಿಯಿದು. ತೆಲುಗು ಚಿತ್ರರಂಗದ ಈ ಅಪ್ರತಿಮ ಪ್ರತಿಭೆ ಕೇವಲ ನಗಿಸಲಿಲ್ಲ. ಮನುಷ್ಯನ ಅಸಹಾಯಕತೆ, ಹತಾಶೆ ಮತ್ತು ಮುಗ್ಧತೆಯನ್ನು ಹೇಗೆ ಸಂಭ್ರಮಿಸಬೇಕು ಎಂಬುದನ್ನು ಕಲಿಸಿಕೊಟ್ಟರು. ಬ್ರಹ್ಮಾನಂದಂ ತೆರೆಯ ಮೇಲೆ ಬಂದಾಗಲೆಲ್ಲ ನಮ್ಮ ನೆಚ್ಚಿನ ಗೆಳೆಯ ಬಂದಂಥ ಆಪ್ತತೆ. ಅವರ ವಿಶಿಷ್ಟವಾದ ನಡಿಗೆ, ಅನಿರೀಕ್ಷಿತವಾಗಿ ಕುಸಿಯುವ, ಹುಯ್ದಾಡುವ ಮುಖಭಾವಗಳು-ಇವೆಲ್ಲವೂ ನಮ್ಮೊಳಗಿನ ಭಾರವನ್ನು ನಗುವಿನ ಮೂಲಕವೇ ಕರಗಿಸಿಬಿಡುತ್ತವೆ. ಈ ಕೃತಿಯಲ್ಲಿ ಬ್ರಹ್ಮಾನಂದಂ ತಮ್ಮ ವೃತ್ತಿಜೀವನದ ಮೈಲಿಗಲ್ಲುಗಳನ್ನಷ್ಟೇ ಪಟ್ಟಿ ಮಾಡಿಲ್ಲ. ಬದಲಿಗೆ, ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದವ ತೆಲುಗು ಚಿತ್ರರಂಗದ ಅನಿವಾರ್ಯ ಶಕ್ತಿಯಾಗಿ ಬೆಳೆದ ಪರಿಯನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಸಾವಿರಾರು ಪಾತ್ರಗಳ ಮೂಲಕ ಬ್ರಹ್ಮಾನಂದಂ ನಮಗೆ ನೀಡಿದ 'ಕಾಮಿಡಿ ಟೈಮಿಂಗ್'ನ ಹಿಂದೆ ಅಡಗಿರುವ ಅವರ ಏಕಾಂತದ ಸಾಧನೆ ಮತ್ತು ಜೀವನಪ್ರೀತಿ ಇಲ್ಲಿ ಹರಳುಗಟ್ಟಿದೆ. ಬದುಕು ಕೆಲವೊಮ್ಮೆ ಗಂಭೀರವಾದ ನಾಟಕದಂತೆ ಕಂಡರೂ, ಅದರ ನಡುವೆ ಬ್ರಹ್ಮಾನಂದಂ ತೆರೆ ಮೇಲೆ ಬಂದು ಹೋದರೆ ಸಾಕು, ಭಾರವಾದ ಮನಸ್ಸು ಹಗುರವಾಗುತ್ತದೆ. ಈ ಪುಸ್ತಕವನ್ನು ಓದುವುದು ಎಂದರೆ ಅಂಥದೇ ಒಂದು ಹಗುರ ಭಾವಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು. ಇಲ್ಲಿ ಬಣ್ಣದ ಮಾತುಗಳಿಲ್ಲ, ಬದಲಿಗೆ ಬಣ್ಣದ ಲೋಕದಲ್ಲಿ ಅಪ್ಪಟ ಮನುಷ್ಯನಾಗಿ ಉಳಿದ ಕಲಾವಿದನೊಬ್ಬನ ಅಂತರಂಗದ ಮಿಡಿತವಿದೆ. ನಗಿಸುವ ಜೀವಿಯ ಬದುಕಿನ ಕಟು-ಕಹಿ ಸತ್ಯಗಳಿವೆ. ಹಾಸ್ಯನಟನಾಗಿ ತಾರಾಮೌಲ್ಯ ಗಿಟ್ಟಿಸಿಕೊಂಡ ಕಲಾವಿದನ ಮೇರು ಸಾಧನೆಯ ಮೆರವಣಿಗೆಯನ್ನು ಇಲ್ಲಿ ಕಾಣಬಹುದು.\u003c\/p\u003e\n\u003cp\u003eವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕ, ವಿಶ್ವವಾಣಿ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":52264456192283,"sku":null,"price":337.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/rrr.jpg?v=1779890740","url":"https:\/\/beetlebookshop.com\/products\/nanu-nimma-brahmanandam","provider":"Beetle Book Shop","version":"1.0","type":"link"}