{"product_id":"akasha-nadi-bayalu-mary-oliver-poems","title":"ಆಕಾಶ ನದಿ ಬಯಲು (ಮೇರಿ ಆಲಿವರ್ ಕವನಗಳು ಕನ್ನಡದಲ್ಲಿ)","description":"\u003cp\u003eಮೇರಿ ಆಲಿವರ್ (೧೯೩೫-೨೧೯) ನಮ್ಮ ಆಧುನಿಕ ಮನಸ್ಸಂತೂ ನಿಸರ್ಗದಿಂದ ಪೂರಾ ದೂರವಾಗಿದೆ ಅನ್ನಿಸುವಾಗ ನಿಸರ್ಗವನ್ನೇ ಕಾವ್ಯದ ದ್ರವ್ಯವಾಗಿ ಬಳಸಿಕೊಂಡ ಮೇರಿ ಆಲಿವರ್ ಬಗ್ಗೆ ಕುತೂಹಲ ಹುಟ್ಟುತ್ತದೆ. ನಿಸರ್ಗವನ್ನು ಬಣ್ಣಿಸುವುದಲ್ಲ, ನಿಸರ್ಗದ ಒಡನಾಟದಲ್ಲಿ ಗ್ರಹಿಕೆ, ಮನಸ್ಸು ದೇಹಗಳನ್ನೆಲ್ಲ ಸೂಕ್ಷಗೊಳಿಸಿಕೊಂಡ ಕವಿ ಆಕೆ. ಕವಿತೆ ಓದುತ್ತ ನಾವೂ ಸೂಕ್ಷ್ಮವಾಗುವ ಹಾಗೆ ಮಾಡುವ ಶಕ್ತಿ ಆಕೆಯ ಬರಹಕ್ಕೆ ಇದೆ. ಗಿಡ, ಮರ, ಹಕ್ಕಿ, ಹೊಲ, ಮರಳು ಅಲೆಗಳಂಥ ಸಹಜ ಸೃಷ್ಟಿಯ ಒಡನಾಟದಲ್ಲಿ ಆಗುವ ಮಾಮೂಲು ಅನಿಸುವ ಅನುಭವಗಳನ್ನು ಸ್ಪಷ್ಟವಾಗಿ, ಸರಳವಾಗಿ ಹೇಳುತ್ತ 'ಮಾಮೂಲು' ಸಂಗತಿಯ ಗಹನತೆ ಓದುಗರ ಮನಸನ್ನು ಆವರಿಸುವ ಹಾಗೆ ಮಾಡುವ ಶಕ್ತಿ ಆಲಿವರ್ಗೆ ಇದೆ. ನಿಸರ್ಗವನ್ನು ನೋಡುತ್ತ ಕವಿ ತನ್ನೊಳಗನ್ನು ನೋಡಿಕೊಂಡ ಹಾಗೆಯೇ ಓದುಗರೂ ತಮ್ಮ ಮತ್ತು ಸಹಜ ನಿಸರ್ಗದ ಸಂಬಂಧ ಪರಿಶೀಲಿಸಿಕೊಳ್ಳುವ ಹಾಗೆ ಈ ರಚನೆಗಳಿವೆ. ಇಂಗ್ಲೀಶ್ ನುಡಿಯ ದಿನ ನಿತ್ಯದ ಬಳಕೆಯ ಲಯವನ್ನೂ ಭಾವಗೀತೆಯ ಗುಣವನ್ನೂ ಮೇಳಗೊಳಿಸಿ ಮುಕ್ತಛಂದದಲ್ಲಿ ಬರೆದಿರುವುದೂ ಮೇರಿ ಆಲಿವರ್ ಆಪ್ತಳೆನಿಸುವುದಕ್ಕೆ ಕಾರಣ.\u003c\/p\u003e\n\u003cp\u003eಕನ್ನಡದ ಕವಿಯಾಗಿ ಹೆಸರು ಮಾಡಿರುವ ಚೈತ್ರಾ ಶಿವಯೋಗಿಮಠ ಅವರು ಆಯ್ದ ಮೇರಿ ಆಲಿವರ್ ಕವಿತೆಗಳನ್ನು ಕನ್ನಡಗೊಳಿಸಿ ಕಾವ್ಯಾಸಕ್ತರ ಅಗತ್ಯವೊಂದನ್ನು ಪೂರೈಸಿದ್ದಾರೆ. ಜೊತೆಗೆ ಕವಿ-ವಿಮರ್ಶಕಿಯೂ ಆಗಿ ಮೇರಿ ಆಲಿವರ್ ಬದುಕು, ಬರಹ ಕುರಿತ ಹಾಗೆ, ಆಕೆಯ ಕಾವ್ಯ ಸ್ವರೂಪದ ಬಗ್ಗೆ ಓದುಗರ ಕುತೂಹಲ ಕೆರಳಿಸುವಂಥ ಪರಿಚಯವನ್ನು ಬರೆದಿದ್ದಾರೆ. ಕವಿಯ ಸಂದರ್ಶನವನ್ನೂ ಅನುಬಂಧದಲ್ಲಿ ಸೇರಿಸಿ ಇನ್ನೊಂದು ಭಾಷೆಯ ಕವಿಯನ್ನು ಕನ್ನಡಿಸುವವರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.\u003c\/p\u003e\n\u003cp\u003eಸಾಮಾಜಿಕ ನಿಲುವು ಮಾತ್ರ ಮುಖ್ಯವೆಂದೋ ತಮ್ಮ ಒಳಗನ್ನು ತಾವು ಭಾವುಕವಾಗಿ ತೋಡಿಕೊಂಡೋ ಹೆಚ್ಚು ಮಾಡಿ ಹೇಳಿಕೊಳ್ಳುವುದೋ ಕವಿತೆಯೆಂದೋ ತಪ್ಪು ತಿಳಿದಿರುವುದೇ ಹೆಚ್ಚು ಅನ್ನಿಸುವ ಕಾಲದಲ್ಲಿ ಮನುಷ್ಯ-ನಿಸರ್ಗಗಳ ಸಂಬಂಧವನ್ನು ಮರಳಿ ಹೊರಳಿ ಬಗೆ ಬಗೆಯಲ್ಲಿ ಮಂಡಿಸುವ ಕವಿತೆಯನ್ನು ಕನ್ನಡಕ್ಕೆ ಹೊಸದಾಗಿ ಪರಿಚಯಿಸಿದ್ದಾರೆ. ಪ್ರಾಚೀನ ಕಾಲದ ಸಾಹಿತ್ಯದಲ್ಲಿ ನಿಸರ್ಗ ವರ್ಣನೆ ಶಾಸ್ತ್ರೀಯವಾಗಿತ್ತು, ನವೋದಯ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣುತಿದ್ದರೂ ಬಹಳ ಮಟ್ಟಿಗೆ ಸುಂದರ ರಮ್ಯವಾಗಿತ್ತು. ನಿಸರ್ಗದ ನೋಟ ನಾಗರಿಕತೆ ಬೆಳೆದ ಹಾಗೆ ಕಣ್ಮರೆಯಾಗಿತ್ತು. ಅದು ಚೈತ್ರಾ ಅವರ ಅನುವಾದದ ಮೂಲಕ ಮತ್ತೆ ಹೊಸ ಸಾಧ್ಯತೆಗಳನ್ನು ತೋರುವಂತೆ ಈಗ ಕನ್ನಡಕ್ಕೆ ಬಂದಿದೆ.\u003c\/p\u003e\n\u003cp\u003eಅನುವಾದದ ರೀತಿ ಕನ್ನಡಕ್ಕೆ ಸಹಜ ಅನಿಸುವಂತೆ ಇದೆ. ಮೊದಲ ಮಳೆಯ ಕಂಪನ್ನು ಕುರಿತು ಬರೆದ ಚೈತ್ರಾ ಶಿವಯೋಗಿಮಠ ತಮ್ಮ ಮನೋಧರ್ಮಕ್ಕೆ ಒಗ್ಗುವ ಕವಿಯನ್ನು ಆಯ್ಕೆ ಮಾಡಿಕೊಂಡು ಆಕೆಯ ನೋಟವನ್ನು ತಮ್ಮದು ಮಾಡಿಕೊಂಡು ಈ ಅನುವಾದ ರೂಪಿಸಿದ್ದಾರೆ. ಈ ಅನುವಾದ ಕನ್ನಡದ ಕವಿತೆಗಳೇ ಆಗಿ ಓದುಗರ ಮನಸನ್ನು ಸೆಳೆಯಲೆಂದು ಹಾರೈಸುತ್ತೇನೆ.\u003c\/p\u003e\n\u003cp\u003e- ಓ. ಎಲ್. ನಾಗಭೂಷಣಸ್ವಾಮಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":51786498048283,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/akasha-nadi-bayalu-mary-oliver-poemsbeetle-book-shop-7479538.jpg?v=1771167485","url":"https:\/\/beetlebookshop.com\/kn\/products\/akasha-nadi-bayalu-mary-oliver-poems","provider":"Beetle Book Shop","version":"1.0","type":"link"}